ADVERTISEMENT

ಜೆಎನ್‌ಯು ಚುನಾವಣೆ: ಎಡ– ಎಬಿವಿಪಿ ನಡುವೆ ತೀವ್ರ ಪೈಪೋಟಿ

ಎಡ ಸಂಘಟನೆಗಳ ಒಕ್ಕೂಟಕ್ಕೆ ಆರಂಭಿಕ ಮುನ್ನಡೆ * ನಾಲ್ಕು ಸ್ಥಾನಗಳಲ್ಲಿ ಒಂದರಲ್ಲಿ ಎಬಿವಿಪಿಗೆ ಮುಂದೆ

ಪಿಟಿಐ
Published 24 ಮಾರ್ಚ್ 2024, 16:12 IST
Last Updated 24 ಮಾರ್ಚ್ 2024, 16:12 IST
ಜೆಎನ್‌ಯು
ಜೆಎನ್‌ಯು   

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಒಕ್ಕೂಟದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಎಡ ಸಂಘಟನೆಗಳ ಒಕ್ಕೂಟ ಮತ್ತು ಆರ್‌ಎಸ್‌ಎಸ್‌ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಡುವೆ ತೀವ್ರ ಹಣಾಹಣಿ ನಡೆದಿದೆ.

ಆರಂಭಿಕ ಸುತ್ತುಗಳ ಎಣಿಕೆ ಪ್ರಕಾರ, ಅಧ್ಯಕ್ಷೀಯ ಸ್ಥಾನಕ್ಕೆ ಎಡ ಸಂಘಟನೆಗಳ ಒಕ್ಕೂಟದ ಅಭ್ಯರ್ಥಿ ಧನಂಜಯ್‌ 1,361 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಎಬಿವಿಪಿಯ ಉಮೇಶ್‌ ಸಿ. ಅಜ್ಮೀರಾ ಅವರು 1,162 ಮತಗಳನ್ನು ಪಡೆದಿದ್ದು, ತೀವ್ರ ಸ್ಪರ್ಧೆ ನೀಡಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಎಡ ಸಂಘಟನೆಯ ಅವಿಜಿತ್‌ ಘೋಷ್‌ ಅವರು 1,214 ಮತಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದರೆ, ಅವರ ಎದುರಾಳಿ ಎಬಿವಿಪಿಯ ದೀಪಿಕಾ ಶರ್ಮಾ ಅವರು 984 ಮತಗಳನ್ನು ಪಡೆದು ಪೈಪೋಟಿ ಒಡ್ಡಿದ್ದಾರೆ.

ADVERTISEMENT

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಡ ಸಂಘಟನೆಗಳ ಬೆಂಬಲಿತ, ಬಿಎಪಿಎಸ್‌ಎ ಅಭ್ಯರ್ಥಿ ಪ್ರಿಯಾಂಶಿ ಆರ್ಯ ಅವರು 1,478 ಮತಗಳನ್ನು ಗಳಿಸಿದ್ದರೆ, ಅವರ ಪ್ರತಿಸ್ಪರ್ಧಿ ಅರ್ಜುನ್‌ ಆನಂದ್‌ ಅವರು 1,309 ಮತಗಳನ್ನು ಪಡೆದಿದ್ದಾರೆ. ಎಡ ಸಂಘಟನೆಗಳ ಅಭ್ಯರ್ಥಿಯಾಗಿದ್ದ ಸ್ವಾತಿ ಸಿಂಗ್‌ ಅವರ ಅಭ್ಯರ್ಥಿತನವನ್ನು ಎಬಿವಿಪಿ ಪ್ರಶ್ನಿಸಿದ ಬಳಿಕ, ಚುನಾವಣಾ ಸಮಿತಿಯ ಸಿಂಗ್‌ ಅವರ ನಾಮನಿರ್ದೇಶನವನ್ನು ರದ್ದುಗೊಳಿಸಿತ್ತು. ಆ ಬಳಿಕ ಎಡ ಸಂಘಟನೆಗಳು ತನ್ನ ಬೆಂಬಲವನ್ನು ಪ್ರಿಯಾಂಶಿ ಆರ್ಯಗೆ ವ್ಯಕ್ತಪಡಿಸಿದ್ದವು.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿಯಲ್ಲಿ ಎಬಿವಿಪಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಎಬಿವಿಪಿ ಅಭ್ಯರ್ಥಿಯು 1391 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿಯಾಗಿರುವ ಎಡ ಸಂಘಟನೆಗಳ ಅಭ್ಯರ್ಥಿ ಎಂ.ಡಿ. ಸಾಜಿದ್‌ 1,321 ಮತಗಳನ್ನು ಪಡೆದಿದ್ದಾರೆ. ಇನ್ನೂ ಹಲವು ವಿಭಾಗಗಳ ಮತಗಳ ಎಣಿಕೆ ಕಾರ್ಯ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.