ADVERTISEMENT

ಗುತ್ತಿಗೆ ವಿಚಾರದಲ್ಲಿ ತಾರತಮ್ಯ ಸಲ್ಲ: ಸುಪ್ರೀಂ ಕೋರ್ಟ್‌

ಉದ್ಯೋಗ ಕುರಿತ ಗುತ್ತಿಗೆ ಕೂಡ ಕಾನೂಬದ್ಧ ಒಪ್ಪಂದ: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 16:12 IST
Last Updated 10 ಏಪ್ರಿಲ್ 2025, 16:12 IST
–
   

ನವದೆಹಲಿ: ಗುತ್ತಿಗೆಯು ಕಾನೂನುಬದ್ಧ ಒಪ್ಪಂದವೇ ಆಗಿದ್ದು, ಇದಕ್ಕೆ ಉದ್ಯೋಗದಾತರು ಮತ್ತು ಉದ್ಯೋಗಿಗಳು ಬದ್ಧವಾಗಿರಬೇಕು. ಈ ವಿಚಾರದಲ್ಲಿ ತಾರತಮ್ಯಕ್ಕೆ ಅವಕಾಶ ಇಲ್ಲ ಎಂದು  ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ದೀಪಾಂಕರ ದತ್ತ ಹಾಗೂ ಮನಮೋಹನ್‌ ಅವರು ಇದ್ದ ನ್ಯಾಯಪೀಠ, ‘ಗುತ್ತಿಗೆ ವಿಚಾರದಲ್ಲಿ ಸಮಾನತೆ ಮುಖ್ಯವಾಗುತ್ತದೆ. ಗುತ್ತಿಗೆ ಒಪ್ಪಂದದ ಭಾಗವಾಗಿರುವ ಕಕ್ಷಿದಾರರ/ವ್ಯಕ್ತಿಗಳ ಪದವಿ ಅಥವಾ ಯೋಗ್ಯತೆ ಆಧಾರದಲ್ಲಿ ಪಕ್ಷಪಾತ ಮಾಡಕೂಡದು. ಹೀಗೆ ಮಾಡುವುದು ಸಮಾನತೆ ತತ್ವದ ಉಲ್ಲಂಘನೆಯಾಗುತ್ತದೆ’ ಎಂದು ಹೇಳಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಉದ್ಯೋಗಿಗಳಾದ ರಾಕೇಶಕುಮಾರ್ ವರ್ಮಾ ಹಾಗೂ ದೀಪ್ತಿ ಭಾಟಿಯಾ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ, ನೀಡಿದ ತೀರ್ಪಿನಲ್ಲಿ ಪೀಠ ಈ ಮಾತು ಹೇಳಿದೆ. 

ADVERTISEMENT

‘ಹಕ್ಕುಗಳು ಮತ್ತು ಹೊಣೆಗಾರಿಕೆಗಳು ಒಪ್ಪಂದದ ಭಾಗವಾಗಿರುವ ವ್ಯಕ್ತಿಗಳ ಪದವಿ, ಸಾಮರ್ಥ್ಯ ಅಥವಾ ಪ್ರಭಾವದ ಮೇಲೆ ಅವಲಂಬಿತವಾಗಿರಬಾರದು’ ಎಂದು ಏಪ್ರಿಲ್‌ 8ರಂದು ಪ್ರಕಟಿಸಿರುವ ತೀರ್ಪಿನಲ್ಲಿ ಪೀಠ ಸ್ಪಷ್ಟಪಡಿಸಿದೆ.

ವರ್ಮಾ ಹಾಗೂ ಭಾಟಿಯಾ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ವ್ಯಾಜ್ಯಗಳನ್ನು ಮುಂಬೈನ ನ್ಯಾಯಾಲಯದಲ್ಲಿಯೇ ನಡೆಸಬೇಕು ಎಂಬುದು ಈ ಇಬ್ಬರ ನೇಮಕಾತಿಗೆ ಸಂಬಂಧಿಸಿದ ಆದೇಶದಲ್ಲಿನ ನಿಬಂಧನೆಯಾಗಿತ್ತು.

ತಮ್ಮನ್ನು ಉದ್ಯೋಗದಿಂದ ತೆಗೆದು ಹಾಕಿದ್ದನ್ನು ಪ್ರಶ್ನಿಸಿದ್ದ ವರ್ಮಾ ಹಾಗೂ ಭಾಟಿಯಾ, ತಮ್ಮ ದೂರಿಗೆ ಸಂಬಂಧಿಸಿದ ವಿಚಾರಣೆಯನ್ನು ಕ್ರಮವಾಗಿ ಪಟ್ನಾ ಹಾಗೂ ದೆಹಲಿ ನ್ಯಾಯಾಲಯಗಳಲ್ಲಿ ನಡೆಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದರು.

ಈ ಇಬ್ಬರ ಮೇಲ್ಮನವಿಗಳನ್ನು ತಿರಸ್ಕರಿಸಿರುವ ಪೀಠ, ‘ನೇಮಕಾತಿಗೆ ಸಂಬಂಧಿಸಿದ ನಿಬಂಧನೆಗಳನ್ನು ಒಪ್ಪಿಕೊಂಡು, ತಮಗೆ ನೀಡಿರುವ ಹುದ್ದೆಗೆ ಸೇರಿದ ಮೇಲೆ ಅದರಂತೆ ಕಾರ್ಯ ನಿರ್ವಹಿಸಬೇಕು. ಮುಂದೊಂದು ದಿನ, ನೇಮಕಾತಿಗೆ ಸಂಬಂಧಿಸಿದ ನಿಯಮವೊಂದು ತಮಗೆ ಅನುಕೂಲಕರವಾಗಿಲ್ಲ ಎಂಬ ಕಾರಣ ನೀಡಿ, ಒಪ್ಪಂದವನ್ನು ಉಲ್ಲಂಘಿಸುವಂತಿಲ್ಲ’ ಎಂದೂ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.