ADVERTISEMENT

ಉದ್ಯೋಗ ದಂಧೆ: 4 ಆಫ್ರಿಕನ್ನರ ಬಳಿ 2 ಲಕ್ಷ ಇಮೇಲ್, 1 ಲಕ್ಷ ಮೊಬೈಲ್ ಸಂಖ್ಯೆ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 14:37 IST
Last Updated 30 ನವೆಂಬರ್ 2022, 14:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ (ಪಿಟಿಐ): ಉದ್ಯೋಗ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಪುಣೆಯಲ್ಲಿ ಬಂಧಿಸಲಾದ ನಾಲ್ವರು ಆಫ್ರಿಕನ್ನರ ಬಳಿ 2 ಲಕ್ಷ ಇಮೇಲ್ ಐಡಿ ಮತ್ತು ಒಂದು ಲಕ್ಷಕ್ಕೂ ಹೆಚ್ಚು ದೂರವಾಣಿ ಸಂಖ್ಯೆಗಳ ಡಾಟಾ ನೋಡಿ ಸೈಬರ್ ಪೊಲೀಸರು ಬೆಚ್ಚಿದ್ದಾರೆ.

ಬಂಧಿತರು ಜಾಂಬಿಯಾ, ಉಗಾಂಡಾ, ನಮೀಬಿಯಾ ಮತ್ತು ಘಾನಾದ ಪ್ರಜೆಗಳಾಗಿದ್ದು, ಇಬ್ಬರು ಮಹಿಳೆಯರು ಸೇರಿ ನಾಲ್ವರು ವಿದ್ಯಾರ್ಥಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು. ಇವರಲ್ಲಿ ಕನಿಷ್ಠ ಮೂವರ ವೀಸಾ ಅವಧಿ ಮುಗಿದಿದೆ. ಬಂಧಿತರು 22–32 ವರ್ಷದೊಳಗಿನವರು ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಏಪ್ರಿಲ್ ಮತ್ತು ಜುಲೈನಲ್ಲಿ ವಂಚಕರು ₹ 26 ಲಕ್ಷ ದೋಚಿದ್ದಾರೆ ಎಂದು ವ್ಯಕ್ತಿಯೊಬ್ಬರು ಮುಂಬೈನ ಬಿಕೆಸಿ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ, ಆರೋಪಿಗಳು ಬಳಸಿದ ವೈಫೈ ರೂಟರ್‌ನಿಂದಾಗಿ ಜಾಡು ಹಿಡಿಯಲು ಸಹಕಾರಿಯಾಯಿತು.

ADVERTISEMENT

ಬಂಧಿತರಿಂದ 2ಲಕ್ಷ ಇಮೇಲ್ ಐಡಿ, 1,04,000 ಜನರ ಮೊಬೈಲ್ ಸಂಖ್ಯೆ, 13 ಮೊಬೈಲ್ ಫೋನ್‌, 4 ಲಾಪ್‌ಟಾಪ್‌, ವಿವಿಧ ದೇಶಗಳ ಪಾಸ್‌ಪೋರ್ಟ್‌, 3 ಇಂಟರ್‌ನೆಟ್ ರೂಟರ್‌, ವಿವಿಧ ಬ್ಯಾಂಕ್‌ಗಳ 17 ಚೆಕ್‌ಬುಕ್‌, 115 ಸಿಮ್‌ಕಾರ್ಡ್‌, 40 ನಕಲಿ ರಬ್ಬರ್ ಸ್ಟಾಂಪ್‌, ಕನಿಷ್ಠ 6 ವಿವಿಧ ಬ್ಯಾಂಕ್‌ಗಳ ಖಾತೆಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.