ADVERTISEMENT

ನ್ಯಾ.ಎಸ್‌.ಎ.ಬೊಬ್ಡೆ ಮುಂದಿನ ಸಿಜೆಐ

ಪಿಟಿಐ
Published 29 ಅಕ್ಟೋಬರ್ 2019, 19:27 IST
Last Updated 29 ಅಕ್ಟೋಬರ್ 2019, 19:27 IST
ಎಸ್‌.ಎ. ಬೊಬ್ಡೆ
ಎಸ್‌.ಎ. ಬೊಬ್ಡೆ   

ನವದೆಹಲಿ: ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರನ್ನು ಸುಪ್ರೀಂ ಕೋರ್ಟ್‌ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಮಂಗಳವಾರ ನೇಮಕ ಮಾಡಲಾಗಿದೆ.

‘63 ವರ್ಷದ ಬೊಬ್ಡೆ ಅವರು ನ.18ರಂದು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 17 ತಿಂಗಳ ಅವಧಿಗೆ ಅವರು ಹುದ್ದೆ ನಿರ್ವಹಿಸಲಿದ್ದು, 2021ರ ಏ.23ರಂದು ನಿವೃತ್ತರಾಗಲಿದ್ದಾರೆ’ ಎಂದು ಕಾನೂನು ಸಚಿವಾಲಯ ತಿಳಿಸಿದೆ.

ನಿಯಮದ ಅನುಸಾರ ಸಿಜೆಐ ನಂತರದಲ್ಲಿ ಸೇವಾ ಹಿರಿತನ ಹೊಂದಿರುವ ನ್ಯಾಯಮೂರ್ತಿಯನ್ನು ಮುಂದೆ ಆ ಹುದ್ದೆಗೆ ನೇಮಿಸಲಾಗುತ್ತದೆ.
ಇದೇ ರೀತಿ, ಸಿಜೆಐ ರಂಜನ್‌ ಗೊಗೊಯಿ ಅವರು ಈ ತಿಂಗಳ ಆರಂಭದಲ್ಲಿ, ನ್ಯಾಯಮೂರ್ತಿ ಬೊಬ್ಡೆ ಅವರನ್ನು ಮುಂದಿನ ಸಿಜೆಐ ಆಗಿ ನೇಮಿಸಲು ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು.‌

ADVERTISEMENT

ಮಂಗಳವಾರ ಬೆಳಗ್ಗೆ ನೇಮಕಾತಿ ಪತ್ರವನ್ನು ಬೊಬ್ಡೆ ಅವರಿಗೆ ನೀಡಲಾ
ಯಿತು ಎಂದು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆ ಪ್ರಕರಣದ ವಿಚಾರಣೆಯಲ್ಲಿ ಭಾಗಿ:ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ಬೊಬ್ಡೆ ಸಹ ಒಬ್ಬರಾಗಿದ್ದು, ಇವರು ಇನ್ನೂ ಹಲವು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ನ.15ರಂದು ಪೀಠ ಈ ಪ್ರಕರಣದ ತೀರ್ಪು ಘೋಷಿಸುವ ನಿರೀಕ್ಷೆ ಇದೆ.

ದೇಶದ ಯಾವುದೇ ಪ್ರಜೆ, ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೂ ಅವರಿಗೆ ಮೂಲಸೌಕರ್ಯ ಮತ್ತು ಸರ್ಕಾರಿ ಸೇವೆಗಳನ್ನು ನಿರಾಕರಿಸುವಂತಿಲ್ಲ ಎಂದು2015ರಲ್ಲಿ ಸ್ಪಷ್ಟ ನಿರ್ದೇಶನ ನೀಡಿದ ಮೂವರು ನ್ಯಾಯಮೂರ್ತಿಗಳ ಪೀಠದಲ್ಲಿ ಸಹ ಬೊಬ್ಡೆ ಇದ್ದರು.

ನಿವೃತ್ತಿಗೂ ಮುನ್ನ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ನ.17ರಂದು ನಿವೃತ್ತಿಯಾಗಲಿದ್ದು, ಇದಕ್ಕೂ ಮೊದಲು ಅವರು ಹಲವು ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಲಿದ್ದಾರೆ. ಇವುಗಳಲ್ಲಿ ರಾಮಜನ್ಮಭೂಮಿ– ಬಾಬರಿ ಮಸೀದಿ ಧ್ವಂಸ ಪ್ರಕರಣ, ರಫೇಲ್‌ ತೀರ್ಪು ಪರಿಶೀಲನೆ ಪ್ರಕರಣಗಳು ಸಹ ಸೇರಿವೆ.

ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಲು ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಮರುಪರಿಶೀಲನೆ ಅರ್ಜಿ, ಮೋದಿ ಕುರಿತು ‘ಚೌಕಿದಾರ ಕಳ್ಳ’ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಪರಾಧ ಪ್ರಕರಣ ದಾಖಲಿಸಬೇಕೆಂದು ಸಲ್ಲಿಕೆಯಾಗಿದ್ದ ಮನವಿ ಅರ್ಜಿಗಳನ್ನು ಗೊಗೊಯಿ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಇತ್ಯರ್ಥಗೊಳಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.