ADVERTISEMENT

ಕಾನೂನು ಮರೆತು ತನಿಖೆಗೆ ಆದೇಶ: ಸುಪ್ರೀಂ ಕೋರ್ಟ್‌ನಲ್ಲಿ ಬಿಎಸ್‌ವೈ ಪರ ವಕೀಲರ ವಾದ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 5:13 IST
Last Updated 20 ಸೆಪ್ಟೆಂಬರ್ 2022, 5:13 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಪೂರ್ವಾನುಮತಿ ಇಲ್ಲದಿದ್ದರೂ ತನಿಖೆ ನಡೆಸಲು ಆದೇಶಿಸಿ ಕರ್ನಾಟಕ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿದೆ ಎಂದು ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಎದುರು ಯಡಿಯೂರಪ್ಪ ಪರವಾಗಿ ಹಿರಿಯ ವಕೀಲರಾದ ಮುಕುಲ್‌ ರೋಹಟಗಿ, ಸಿದ್ಧಾರ್ಥ ಲೂತ್ರಾ ಹಾಗೂ ಸಿದ್ಧಾರ್ಥ ದವೆ ವಾದ ಮಂಡಿಸಿದರು. ‘ವಿಚಾರಣೆಗೆ ಅನುಮತಿ ನೀಡಲು ಕಾನೂನಿನ ಪ್ರಕಾರ ಸಕ್ಷಮ ಪ್ರಾಧಿಕಾರದ ಅನುಮತಿ ಕಡ್ಡಾಯ. ಯಡಿಯೂರಪ್ಪ ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರ ಅನುಮತಿ ನಿರಾಕರಿಸಿದ್ದರೂ ಹೈಕೋರ್ಟ್‌ ಇದನ್ನು ಬದಲಾಯಿಸಿದೆ’ ಎಂದು ರೋಹಟಗಿ ವಾದಿಸಿದರು.

ಪ್ರಕರಣದ ವಿಚಾರಣಾ ಹಂತದಲ್ಲಿ ಅನುಮತಿ ಕಡ್ಡಾಯ ಎಂದು ಹೈಕೋರ್ಟ್‌ ಹೇಳಿದೆ. ಆದರೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ಸೆಕ್ಷನ್‌ 17 (ಎ) ಪ್ರಕಾರ, ಜನಪ್ರತಿನಿಧಿಗಳ ಪ್ರಕರಣದಲ್ಲಿ ಸೂಕ್ತ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ತನಿಖೆ ಅಥವಾ ವಿಚಾರಣೆ ನಡೆಸುವಂತಿಲ್ಲ ಎಂಬ ನಿಯಮವನ್ನು ಹೈಕೋರ್ಟ್‌ ನಿರ್ಲಕ್ಷ್ಯಿಸಿದೆ ಎಂದು ಅವರು ವಾದ ಮಂಡಿಸಿದರು.

ADVERTISEMENT

ಬಳಿಕ ನ್ಯಾಯಪೀಠವು, ಮೇಲ್ಮನವಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು. ಪ್ರಕರಣದಲ್ಲಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸುವ ಮೊದಲು ಮೂಲ ದೂರುದಾರ ಟಿ.ಜೆ.ಅಬ್ರಹಾಂ ಅವರ ವಾದವನ್ನು ಆಲಿಸುವುದಾಗಿ ಪೀಠ ತಿಳಿಸಿತು.

ಬಿಡಿಎ ವಸತಿ ಯೋಜನೆಯೊಂದರ ಕಾಮಗಾರಿಯ ಗುತ್ತಿಗೆ ನೀಡಲು ಗುತ್ತಿಗೆದಾರರಿಂದ ಲಂಚ ಪಡೆದ ಆರೋಪದ ಮೇಲೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಬಿ.ಎಸ್‌. ಯಡಿಯೂರಪ್ಪ, ಅವರ ಮಗ ಹಾಗೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಹೈಕೋರ್ಟ್‌ ಸೂಚಿಸಿತ್ತು. ಲೋಕಾಯುಕ್ತ ಪೊಲೀಸರು ಕಳೆದ ಶುಕ್ರವಾರ ಎಫ್‌ಐಆರ್‌ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.