ಪ್ರಧಾನಿ ನರೇಂದ್ರ ಮೋದಿ
(ಸಂಗ್ರಹ ಚಿತ್ರ)
ನವದೆಹಲಿ: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೋಮವಾರ ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ಧರ್ಮದ ಆಧಾರದಲ್ಲಿ ಮೀಸಲಾತಿ ಇರಬಾರದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದರು. ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿ’ ಎಂದು ಹೇಳಿದರು.
‘ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಿತ್ತುಕೊಂಡು ಧರ್ಮದ ಆಧಾರದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಿದೆ’ ಎಂದು ಅವರು ಆರೋಪಿಸಿದರು.
ಹರಿಯಾಣದ ಹಿಸಾರ್‌ನ ಮಹಾರಾಜ ಅಗ್ರಸೇನ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅಯೋಧ್ಯೆಗೆ ವಾಣಿಜ್ಯ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
‘ಕಾಂಗ್ರೆಸ್ ಪಕ್ಷವು ಮುಸ್ಲಿಮರಲ್ಲಿ ಕೆಲವೇ ಮೂಲಭೂತವಾದಿಗಳನ್ನು ಸಂತೋಷಪಡಿಸುವ ತುಷ್ಟೀಕರಣ ನೀತಿ ಅನುಸರಿಸಿದೆ. ಅದರಿಂದಾಗಿ ಉಳಿದ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಆ ಸಮುದಾಯದವರು ಅನಕ್ಷರಸ್ಥರು ಮತ್ತು ಬಡವರಾಗಿಯೇ ಉಳಿದಿದ್ದಾರೆ’ ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ಓಲೈಕೆ ರಾಜಕಾರಣಕ್ಕೆ ದೊಡ್ಡ ಪುರಾವೆ ಎಂದರೆ 2014ರ ಸಾರ್ವತ್ರಿಕ ಚುನಾವಣೆ ಮುನ್ನ ವಕ್ಫ್ ಕಾನೂನಿಗೆ ಮಾಡಿದ ತಿದ್ದುಪಡಿ ಎಂದು ಮೋದಿ ಹೇಳಿದರು.
‘ಸ್ವಾತಂತ್ರ್ಯ ಸಿಕ್ಕ ದಿನದಿಂದ 2013ರ ವರೆಗೆ ವಕ್ಫ್ ಕಾನೂನು ಇತ್ತು. ಆದರೆ, ಚುನಾವಣೆಗಳನ್ನು ಗೆಲ್ಲಲು ಹಾಗೂ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು 2013ರ ಕೊನೆಯಲ್ಲಿ ಆತುರದಿಂದ ವಕ್ಫ್ ಕಾನೂನಿಗೆ ತಿದ್ದುಪಡಿ ಮಾಡಿತು. ಇದರಿಂದಾಗಿ, ಚುನಾವಣೆಯಲ್ಲಿ ಮತಗಳನ್ನು ಪಡೆಯಬಹುದು ಎಂಬುದು ಕಾಂಗ್ರೆಸ್ ಯೋಚನೆಯಾಗಿತ್ತು.ಇಂತಹ ಬದಲಾವಣೆಗಳನ್ನು ತರುವ ಮೂಲಕ ಕಾಂಗ್ರೆಸ್ ಪಕ್ಷವು ಬಾಬಾಸಾಹೇಬರಿಗೆ ದೊಡ್ಡ ಅವಮಾನ ಮಾಡಿತು’ ಎಂದರು.
‘ವಕ್ಫ್ ಮಂಡಳಿಯು ದೇಶದಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿ ಹೊಂದಿದೆ. ಈ ಭೂಮಿಯನ್ನು ಬಡವರು, ನಿರ್ಗತಿಕ ಮಹಿಳೆಯರು ಹಾಗೂ ಮಕ್ಕಳ ಪ್ರಯೋಜನಕ್ಕೆ ಬಳಸಬಹುದಿತ್ತು. ಇದನ್ನು ಪ್ರಾಮಾಣಿಕವಾಗಿ ಬಳಸಿದ್ದರೆ, ಮುಸ್ಲಿಂ ಯುವಕರು ಟೈರ್ ಪಂಕ್ಚರ್ ಸರಿಪಡಿಸುವ ಮೂಲಕ ತಮ್ಮ ಜೀವನವನ್ನು ಕಳೆಯಬೇಕಾಗಿರಲಿಲ್ಲ. ವಕ್ಫ್ ಜಮೀನಿನಿಂದ ಬೆರಳೆಣಿಕೆಯಷ್ಟು ಭೂಮಾಫಿಯಾದವರಿಗೆ ಲಾಭವಾಯಿತು. ಈ ಭೂಮಾಫಿಯಾವು ಬಡವರು, ಆದಿವಾಸಿಗಳ, ವಿಧವೆಯರ ಭೂಮಿ ಲೂಟಿ ಮಾಡಿತು. ಈ ದೌರ್ಜನ್ಯ ಖಂಡಿಸಿ ನೂರಾರು ವಿಧವೆಯರು ಕೇಂದ್ರಕ್ಕೆ ಪತ್ರ ಬರೆದರು. ಆ ಬಳಿಕ ಈ ಕಾನೂನಿನ ಬಗ್ಗೆ ಚರ್ಚೆ ಆರಂಭವಾಯಿತು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.