ADVERTISEMENT

ಕರ್ನಾಟಕ: ಉನ್ನತ ಶಿಕ್ಷಣ ನೋಂದಣಿ ಶೇ 1ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:49 IST
Last Updated 22 ಸೆಪ್ಟೆಂಬರ್ 2019, 19:49 IST
   

ನವದೆಹಲಿ: 2018–19ರ ಅವಧಿಯಲ್ಲಿ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳ ‘ಒಟ್ಟು ನೋಂದಣಿ ಅನುಪಾತ’ (ಜಿಇಆರ್‌) ಶೇ 1ರಷ್ಟು ಏರಿಕೆಯಾಗಿದೆ. ಆದರೆ ಪಕ್ಕದ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿಗೆ ಹೋಲಿಸಿದರೆ, ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ರಾಜ್ಯದ ವಿದ್ಯಾರ್ಥಿಗಳ ಪ್ರಮಾಣ ತೀರಾ ಕಡಿಮೆಯಿದೆ ಎಂದು ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್‌ಇ) ವರದಿ ತಿಳಿಸಿದೆ.

ರಾಜ್ಯದಲ್ಲಿ ಪದವಿ ಪೂರೈಸಿದ ಬಳಿಕ ಉನ್ನತ ಶಿಕ್ಷಣಕ್ಕೆ ಸೇರುವ18–23 ವರ್ಷದೊಳಗಿನವರ ಪ್ರಮಾಣ ಶೇ 27.8ರಿಂದ ಶೇ 28.8ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ರಾಜ್ಯ 18ನೇ ಸ್ಥಾನದಲ್ಲಿದೆ. ಸಿಕ್ಕಿಂ ಮೊದಲ ಹಾಗೂ ಬಿಹಾರ ಕೊನೆಯ ಸ್ಥಾನದಲ್ಲಿವೆ.

ಅತಿಹೆಚ್ಚು ಕಾಲೇಜುಗಳನ್ನು ಹೊಂದಿರುವ ದೇಶದ ಏಳು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯದಲ್ಲಿ 3,670 ಕಾಲೇಜುಗಳಿದ್ದು, ಲಕ್ಷ ಜನರಿಗೆ 53 ಕಾಲೇಜುಗಳಿವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರ, ತಮಿಳುನಾಡು ಹಾಗೂ ಗುಜರಾತ್‌ನಲ್ಲಿ ಲಕ್ಷ ಜನರಿಗೆ 28ರಿಂದ 49 ಕಾಲೇಜುಗಳಿವೆ.

ADVERTISEMENT

ವಿಶ್ವವಿದ್ಯಾಲಯಗಳ ವಿಚಾರದಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 65 ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ನೋಂದಣಿ ಅನುಪಾತವನ್ನು 2024ರ ವೇಳೆಗೆ ದ್ವಿಗುಣಗೊಳಿಸುವ ಭರವಸೆಯನ್ನು ಉನ್ನತ ಶಿಕ್ಷಣ ಸಚಿವಾಲಯ ವ್ಯಕ್ತಪಡಿಸಿದೆ.

ಲಿಂಗಾನುಪಾತದ ಬಗ್ಗೆಯೂ ವರದಿ ಬೆಳಕು ಚೆಲ್ಲಿದ್ದು, ಮಹಿಳೆಯರಿಗಿಂತ ಪುರುಷರ ನೋಂದಣಿ ಹೆಚ್ಚಿಗೆ ಇದೆ. ಪದವಿ ಹಂತದಲ್ಲಿ ಪುರುಷ ಹಾಗೂ ಮಹಿಳೆಯರ ಅನುಪಾತ ಕ್ರಮವಾಗಿ 51%:49%, ಡಿಪ್ಲೊಮಾದಲ್ಲಿ 66.8%:33.2% ಮತ್ತು ಪಿಎಚ್‌.ಡಿ ಹಂತದಲ್ಲಿ 56.18%:43.82% ಇದೆ.

ನೋಂದಣಿ ಅನುಪಾತ

ಕರ್ನಾಟಕ - 28.8%

ಸಿಕ್ಕಿಂ - 53.9%

ಚಂಡೀಗಡ - 50.6%

ತಮಿಳುನಾಡು - 49%

ಕೇರಳ - 37%

ತೆಲಂಗಾಣ - 36.2%

ಆಂಧ್ರಪ್ರದೇಶ - 32.4%

ಮಹಾರಾಷ್ಟ್ರ - 32%

ಬಿಹಾರ - 13.6%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.