ADVERTISEMENT

ಕರ್ತಾರಪುರ ಕಾರಿಡಾರ್: ಪಾಕ್‌ ಆಹ್ವಾನ

ಪಾಕಿಸ್ತಾನದ ಪ್ರಧಾನಿಯಿಂದ ಯೋಜನೆಗೆ ಇದೇ 28ರಂದು ಚಾಲನೆ

ಪಿಟಿಐ
Published 25 ನವೆಂಬರ್ 2018, 20:03 IST
Last Updated 25 ನವೆಂಬರ್ 2018, 20:03 IST

ಇಸ್ಲಾಮಾಬಾದ್‌/ ನವದೆಹಲಿ: ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಕಾರಿಡಾರ್ ನಿರ್ಮಿಸುವ ಯೋಜನೆಗೆ ಇದೇ 28ರಂದು ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮಕ್ಕೆ, ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಪಾಕಿಸ್ತಾನ ಆಹ್ವಾನಿಸಿದೆ.

ಭಾರತ–ಪಾಕಿಸ್ತಾನದ ಗಡಿ ಬಳಿ ಪಾಕ್‌ ನೆಲದಲ್ಲಿ ಈ ಗುರುದ್ವಾರ ಇದ್ದು, ಪ್ರಧಾನಿ ಇಮ್ರಾನ್‌ ಖಾನ್ ಶಿಲಾನ್ಯಾಸ ನೆರವೇರಿಸಲಿದ್ದಾರೆ.

‘ಸುಷ್ಮಾ ಸ್ವರಾಜ್‌, ಪಂಜಾಬ್ ಮುಖ್ಯಮಂತ್ರಿ ಕಾಪ‍್ಟನ್‌ ಅಮರಿಂದರ್ ಸಿಂಗ್ ಮತ್ತು ಸಚಿವ ನವಜೋತ್ ಸಿಂಗ್ ಸಿಧು ಅವರನ್ನು ಪಾಕಿಸ್ತಾನ ಸರ್ಕಾರದ ಪರವಾಗಿ ಆಹ್ವಾನಿಸುತ್ತಿದ್ದೇನೆ’ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಬಳಿಕ ಖುರೇಶಿ ಅವರಿಗೆ ಪತ್ರ ಬರೆದಿರುವ ಸುಷ್ಮಾ, ‘ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದಕ್ಕೆ ಧನ್ಯವಾದ. ಆದರೆ, ಪೂರ್ವ ನಿಗದಿಯಂತೆ ತೆಲಂಗಾಣ ಚುನಾವಣಾ ಪ್ರಚಾರಕ್ಕೆ ತೆರಳಬೇಕಿದ್ದು, ಕರ್ತಾರಪುರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ನಮ್ಮ ಸರ್ಕಾರದ ಪರವಾಗಿ, ಕೇಂದ್ರ ಸಚಿವರಾದ ಹರ್‌ಸಿಮ್ರತ್‌ ಕೌರ್ ಬಾದಲ್‌ ಮತ್ತು ಹರ್ದೀಪ್‌ ಸಿಂಗ್‌ ಪುರಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.

ಸಚಿವರನ್ನು ಕಳುಹಿಸುವ ನಿರ್ಧಾರವನ್ನು ಸ್ವಾಗತಿಸಿರುವ ಪಾಕಿಸ್ತಾನ, ಇದೊಂದು ಸಕಾರಾತ್ಮಕ ನಡೆ ಎಂದು ಪ್ರತಿಕ್ರಿಯಿಸಿದೆ.

ನಿರಾಕರಣೆ, ಒಪ್ಪಿಗೆ: ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಿರಾಕರಿಸಿದ್ದರೆ, ಸಚಿವ ನವಜೋತ್‌ ಸಿಂಗ್ ಸಿಧು ಅತೀವ ಸಂತಸದಿಂದ ಒಪ್ಪಿದ್ದಾರೆ.

ಈ ಕಾರಿಡಾರ್ ನಿರ್ಮಾಣವಾಗಬೇಕೆಂಬುದು ಸಿಖ್‌ ಸಮುದಾಯದ ಹಲವು ದಿನಗಳ ಬೇಡಿಕೆಯಾಗಿತ್ತು. ಗುರುನಾನಕ್‌ ಅವರ 550ನೇ ಜನ್ಮ ವರ್ಷಾಚರಣೆ ಆರಂಭದ ಸಂದರ್ಭದಲ್ಲಿ ಶುಕ್ರವಾರ ಎರಡೂ ದೇಶಗಳು ಯೋಜನೆಗೆ ಒಪ್ಪಿಗೆ ಸೂಚಿಸಿದ್ದವು. ಭಾರತದ ಪಂಜಾಬ್‌ನ ಗಡಿಯಿಂದ 3 ಕಿ.ಮೀ.ನಷ್ಟು ದೂರದಲ್ಲಿ ಈ ಗುರುದ್ವಾರವಿದೆ.

**

ಭಾರತದಲ್ಲಿ ಇಂದು ಚಾಲನೆ

ಗುರುದ್ವಾರ ಕಾರಿಡಾರ್‌ನ ಭಾರತದ ಗಡಿಯೊಳಗಿನ ಕಾಮಗಾರಿಗೆ ಸೋಮವಾರ (ನ. 26) ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.