ADVERTISEMENT

ವೇದ ಘೋಷಗಳ ಮಧ್ಯೆ ಕಾಶಿ ಧಾಮಕ್ಕೆ ಮೋದಿ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 21:25 IST
Last Updated 13 ಡಿಸೆಂಬರ್ 2021, 21:25 IST
ಕಾಶಿ ವಿಶ್ವನಾಥ ಧಾಮ ಯೋಜನೆಯ ಮೊದಲ ಹಂತದ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶಿವಲಿಂಗ ಅಭಿಷೇಕಕ್ಕಾಗಿ ಗಂಗಾಜಲವನ್ನು ತಂದರು –ಪಿಟಿಐ ಚಿತ್ರ
ಕಾಶಿ ವಿಶ್ವನಾಥ ಧಾಮ ಯೋಜನೆಯ ಮೊದಲ ಹಂತದ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶಿವಲಿಂಗ ಅಭಿಷೇಕಕ್ಕಾಗಿ ಗಂಗಾಜಲವನ್ನು ತಂದರು –ಪಿಟಿಐ ಚಿತ್ರ   

ಲಖನೌ: ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯ ವ್ಯಾಪ್ತಿಯಲ್ಲಿರುವ ಕಾಶಿ ವಿಶ್ವನಾಥ ಧಾಮ ಯೋಜನೆಯ (ಕಾರಿಡಾರ್‌) ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೇದಘೋಷಗಳ ಮಧ್ಯೆ ಸೋಮವಾರ ಉದ್ಘಾಟಿಸಿದರು. ಪಟ್ಟಣದ ಪ್ರಾಚೀನ ಭವ್ಯತೆಯನ್ನು ಅವರು ನೆನಪಿಸಿಕೊಂಡರು. ದೇಶದ ಪ್ರಾಚೀನ ಭವ್ಯತೆಯನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ನವೀಕೃತ ದೇವಾಲಯವು ಭಕ್ತರಿಗೆ ನೀಡುತ್ತದೆ ಎಂದು ಹೇಳಿದರು.

ದೇಶದ ವಿವಿಧ ಭಾಗಗಳಿಂದ ಬಂದ ನೂರಾರು ಸಂತರ ಸಮ್ಮುಖದಲ್ಲಿ ಮೋದಿ ಅವರು ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿದರು. ಪ್ರಧಾನಿಯವರು ಪ್ರಸಿದ್ಧ ಕಾಲಭೈರವ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಗಂಗಾ ನದಿಯಲ್ಲಿ ಮಿಂದು ಗಂಗಾಜಲವನ್ನು ತಂದರು. ಶಿವಲಿಂಗಕ್ಕೆ ಗಂಗಾಜಲದಲ್ಲಿ ಅಭಿಷೇಕ ಮಾಡಿದರು.

ಮೋದಿ ಅವರಿದ್ದ ವಾಹನ ಸಾಲು ಕಾಶಿ ವಿಶ್ವನಾಥ ಧಾಮದತ್ತ ಸಾಗುತ್ತಿದ್ದಂತೆಯೇ ರಸ್ತೆ ಬದಿಯಲ್ಲಿದ್ದ ಜನರು ‘ಬಮ್‌ ಬಮ್‌ ಭೋಲೆ’ ಘೋಷಣೆ ಕೂಗಿದರು. ಐದು ಲಕ್ಷ ಚದರ ಅಡಿ ಪ್ರದೇಶದಲ್ಲಿ ವ್ಯಾಪಿಸಿರುವ ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಿದ ಬಳಿಕ ಮೋದಿ ಮಾತನಾಡಿದರು. ಪ್ರಾಚೀನ ಮತ್ತು ಆಧುನಿಕತೆಯ ಸಂಗಮದಂತೆ ಈ ಧಾಮವು ಇದೆ ಎಂದು ಅವರು ಬಣ್ಣಿಸಿದರು.

ADVERTISEMENT

ತಮ್ಮ ವಿವೇಕದ ಮೂಲಕ ಜಗತ್ತಿನ ತಿಳಿವಳಿಕೆ ಹೆಚ್ಚಿಸಿದ ಹಲವು ಮೇರು ವ್ಯಕ್ತಿಗಳು ಕಾಶಿಯಲ್ಲಿ ನೆಲೆಯಾಗಿದ್ದರು. ‘ಕಾಶಿಯು ಹಲವು ಏರಿಳಿತಗಳನ್ನು ಕಂಡಿದೆ. ಔರಂಗಜೇಬನಂತಹ (ಮೊಘಲ್‌ ದೊರೆ) ವ್ಯಕ್ತಿಗಳು ನಮ್ಮ ಸಂಸ್ಕೃತಿಯನ್ನು ಕೊಲ್ಲಲು ಯತ್ನಿಸಿದ್ದಾರೆ. ಶಿವಾಜಿಯಂತಹ ಜನರು ಅದನ್ನು ರಕ್ಷಿಸಿದ್ದಾರೆ’ ಎಂದು ಮೋದಿ ಹೇಳಿದರು.

ಕಾಶಿಯನ್ನು ನಾಶಪಡಿಸುವ ಪ್ರಯತ್ನಗಳು ನಡೆದಿದ್ದರೂ ನಗರವು ಅದನ್ನು ಜೀರ್ಣಿಸಿಕೊಂಡು ಬಂದಿದೆ. ತನ್ನ ಸಮೃದ್ಧ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.ಕಾಶಿ ವಿಶ್ವನಾಥ ಧಾಮ ಯೋಜನೆಗೆ ಮೋದಿ ಅವರು 2019ರ ಮಾರ್ಚ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಯೋಜನೆಗೆ ಸಂಬಂಧಿಸಿ ಕೆಲವು ವಿವಾದಗಳೂ ಸೃಷ್ಟಿಯಾಗಿದ್ದವು. ದೇವಾಲಯದ ನವೀಕರಣಕ್ಕಾಗಿ ಕೆಲವು ಅಂಗಡಿಗಳು ಮತ್ತು ಮನೆಗಳನ್ನು ನೆಲಸಮ ಮಾಡಲಾಗಿತ್ತು. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಪ್ರಾಚೀನವಾದ ನೂರಾರು ಸಣ್ಣ ದೇವಾಲಯಗಳನ್ನೂ ನಾಶ ಮಾಡಲಾಗಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಮೊದಲು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧ ಭಾಗಗಳಿಂದ ನೂರಾರು ಸಂತರನ್ನು ಕರೆಸಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಸಚಿವ ಸಂಪುಟದ ಸಭೆ ಕೂಡ ಇಲ್ಲಿಯೇ ನಡೆಯಲಿದೆ. ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ವಾರಾಣಸಿಯಲ್ಲಿ ಮಂಗಳವಾರ ಸಭೆ ಸೇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.