ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬ ಹತ್ಯೆಯಾಗಿದ್ದಾನೆ.
ಗುಪ್ತಚರ ಮಾಹಿತಿ ಆಧಾರದ ಮೇಲೆ ಪೊಲೀಸರು ಹಾಗೂ ಭದ್ರತಾ ಪಡೆ ಸಿಬ್ಬಂದಿ ಜಿಲ್ಲೆಯ ಛತ್ರು ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಉಗ್ರರು ಹಾಗೂ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ. ಮೃತ ಉಗ್ರ ಪಾಕಿಸ್ತಾನದ ಮೂಲದವನು ಎನ್ನಲಾಗಿದೆ ಎಂದು ಸೇನೆಯ ಜಮ್ಮು ಘಟಕವು ‘ಎಕ್ಸ್’ನಲ್ಲಿ ಮಾಹಿತಿ ನೀಡಿದೆ.
‘ಪ್ರತಿಕೂಲ ಹವಾಮಾನದ ನಡುವೆಯೂ ನಮ್ಮ ಸೈನಿಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಹೇಳಿದೆ. ಅಲ್ಲದೇ ಹಿಮದ ನಡುವೆ ಅರಣ್ಯದ ಕಿರಿದಾದ ದಾರಿಯಲ್ಲಿ ಸೈನಿಕರು ನಡೆದು ಹೋಗುತ್ತಿರುವ ಎರಡು ಚಿತ್ರಗಳನ್ನೂ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.