ADVERTISEMENT

ಚಿನ್ನ ಕಳ್ಳಸಾಗಣೆ ಪ್ರಕರಣ: 53 ಜನರಿಗೆ ನೋಟಿಸ್‌

ಪಿಟಿಐ
Published 20 ಜೂನ್ 2021, 10:54 IST
Last Updated 20 ಜೂನ್ 2021, 10:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಚ್ಚಿ (ಪಿಟಿಐ): ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಕಸ್ಟಮ್ಸ್‌ ಇಲಾಖೆ ಅಧಿಕಾರಿಗಳು, ಮುಖ್ಯಆರೋಪಿ ಸ್ವಪ್ನಾ ಸುರೇಶ್‌ ಸೇರಿದಂತೆ 53 ಜನರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ನೋಟಿಸ್‌ ಜಾರಿಯಾದವರಲ್ಲಿ ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಎಂ.ಶಿವಶಂಕರ್, ತಿರುವನಂತಪುರದ ಯುಎಇ ಕಾನ್ಸುಲೇಟ್‌ನ ಇಬ್ಬರು ಮಾಜಿ ಅಧಿಕಾರಿಗಳೂ ಇದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

‘ಚಿನ್ನ ಕಳ್ಳಸಾಗಣೆ ಪ್ರಕರಣ ಕುರಿತಂತೆ ಕಸ್ಟಮ್ಸ್‌ ಕಾಯ್ದೆಯ ಪ್ರಕಾರ ನಿಮ್ಮ ವಿರುದ್ಧ ಏಕೆ ಕ್ರಮಜರುಗಿಸಬಾರದು’ ಎಂದು ಪ್ರಶ್ನಿಸಿ ಕಸ್ಟಮ್ಸ್‌ ಆಯುಕ್ತ (ನಿಯಂತ್ರಣ) ಸುಮಿತ್ ಕುಮಾರ್ ಜೂನ್‌ 16ರಂದು ನೋಟಿಸ್‌ ಜಾರಿಮಾಡಿದ್ದಾರೆ.

ADVERTISEMENT

ಒಟ್ಟು 167 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡಿದ್ದಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಒಮ್ಮೆ ಸುಮಾರು ₹ 15 ಕೋಟಿ ಮೌಲ್ಯದ 30 ಕೆ.ಜಿ ಚಿನ್ನವನ್ನು ಅಧಿಕಾರಿಗಳು ತಿರುವನಂತಪುರ ವಿಮಾನನಿಲ್ದಾಣದಲ್ಲಿ ಕಾನ್ಸುಲೇಟ್‌ನ ರಾಜತಾಂತ್ರಿಕರೊಬ್ಬರಿಗೆ ಸೇರಿದ್ದ ಬ್ಯಾಗ್‌ನಿಂದ ಜುಲೈ 5,2020ರಂದು ಜಪ್ತಿ ಮಾಡಿದ್ದರು.

ಇದೇ ಪ್ರಕರಣದ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯದ ಮೂಲಕ ಯುಎಇ ಕಾನ್ಸುಲೇಟ್‌ ಜನರಲ್ ಜಮಾಲ್‌ ಅಲ್‌ ಜಬಿ ಮತ್ತು ರಷಿದ್‌ ಖಮಿಸ್‌ ಅಲಿ ಅವರಿಗೂ ನೋಟಿಸ್ ಜಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.