ADVERTISEMENT

ಕೇರಳ: ನಾನು ಆ ಪಕ್ಷದ ಕಾರ್ಯಕರ್ತನಲ್ಲವೆಂದು ಬಿಜೆಪಿಯ ಟಿಕೆಟ್‌ ನಿರಾಕರಿಸಿದ ಯುವಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮಾರ್ಚ್ 2021, 14:57 IST
Last Updated 15 ಮಾರ್ಚ್ 2021, 14:57 IST
ಮಣಿಕುಟ್ಟನ್‌
ಮಣಿಕುಟ್ಟನ್‌    

ತಿರುವನಂತಪುರ: ಕೇರಳದ ಮಾನಂದವಾಡಿ ಕ್ಷೇತ್ರದಿಂದ ಮಣಿಕುಟ್ಟನ್‌ ಎಂಬುವವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಬಿಜೆಪಿ ಘೋಷಿಸಿತ್ತು. ಆದಿವಾಸಿ ಪಾನಿಯಾ ಸಮುದಾಯದ ಮೊದಲ ಪದವೀಧರರಾದ ಮಣಿಕುಟ್ಟನ್‌ ಅವರು ಬಿಜೆಪಿಯ ಟಿಕೆಟ್‌ ಅನ್ನು ನಿರಾಕರಿಸಿದ್ದಾರೆ.

ಈ ವಿಚಾರವಾಗಿ ಅಂಬೇಡ್ಕರ್‌ ಚಿತ್ರವೊಂದನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿರುವ ಅವರು, 'ನನ್ನನ್ನು ಗಲ್ಲಿಗೇರಿಸಿದರೂ ಸರಿಯೇ, ನಾನು ಮಾತ್ರ ನನ್ನ ಜನರಿಗೆ ದ್ರೋಹ ಮಾಡುವುದಿಲ್ಲ' ಎಂದು ತಿಳಿಸಿದ್ದಾರೆ.

'ನನಗೆ ರಾಜಕೀಯಕ್ಕೆ ಬರುವುದು ಇಷ್ಟವಿಲ್ಲ. ನನ್ನ ಕುಟುಂಬ ಮತ್ತು ವೃತ್ತಿ ನನಗೆ ಮುಖ್ಯವಾಗಿದೆ. ಸ್ಥಳೀಯ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿದ್ದರು. ಅವರ ಆಹ್ವಾನವನ್ನು ನಾನು ನಿರಾಕರಿಸಿದ್ದೆ. ಆದರೂ, ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಇರುವುದನ್ನು ನೋಡಿ ನನಗೆ ಅಚ್ಚರಿಯಾಯಿತು' ಎಂದು ಮಣಿಕುಟ್ಟನ್‌ ಹೇಳಿದ್ದಾರೆ.

ADVERTISEMENT

'ನಾನು ಬಿಜೆಪಿಯ ಕಾರ್ಯಕರ್ತನೂ ಅಲ್ಲ. ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ. ಹೀಗಾಗಿ, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ' ಎಂದು ಮಣಿಕುಟ್ಟನ್‌ ಸ್ಪಷ್ಟಪಡಿಸಿದ್ದಾರೆ.

ಎಂಬಿಎ ಪದವಿ ಪಡೆದಿರುವ ಮಣಿಕುಟ್ಟನ್‌ ಅವರು ಪ್ರಸ್ತುತ ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೇರಳ ವಿಧಾನಸಭೆಯ 140 ಕ್ಷೇತ್ರಗಳ ಪೈಕಿ 115ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿತ್ತು.

ಕೇರಳ ವಿಧಾನಸಭೆಯ 14 ಜಿಲ್ಲೆಗಳ 140 ಕ್ಷೇತ್ರಗಳಿಗೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.