ಜೈಲು (ಪ್ರಾತಿನಿಧಿಕ ಚಿತ್ರ)
ಪಾಲಕ್ಕಾಡ್(ಕೇರಳ): 2022ರಲ್ಲಿ ತನ್ನ ಸಂಬಂಧಿ 15 ವರ್ಷದ ಬಾಲಕಿ ಮೇಲೆ ಆಕೆಯ ನಿವಾಸದಲ್ಲೇ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ ಕೇರಳದ ನ್ಯಾಯಾಲಯವು ಶುಕ್ರವಾರ ವ್ಯಕ್ತಿಯೊಬ್ಬನಿಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಿದೆ.
ಪಟ್ಟಾಂಬಿಯ ತ್ವರಿತಗತಿಯ ವಿಶೇಷ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸಂಜು ಟಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆ ಮತ್ತು ಐಪಿಸಿಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆ ವ್ಯಕ್ತಿಗೆ 43 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ವಿಶೇಷ ಸರ್ಕಾರಿ ವಕೀಲ (ಎಸ್‌ಪಿಪಿ) ನಿಶಾ ವಿಜಯಕುಮಾರ್ ತಿಳಿಸಿದ್ದಾರೆ.
49 ವರ್ಷದ ವ್ಯಕ್ತಿ ಮೊದಲು 43 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಮತ್ತು ನಂತರ ಪೊಕ್ಸೊ ಕಾಯ್ದೆಯ ಪ್ರತ್ಯೇಕ ನಿಬಂಧನೆಗಳ ಅಡಿಯಲ್ಲಿ ಅವನ ಜೀವಾವಧಿ ಶಿಕ್ಷೆಯು ಪ್ರಾರಂಭವಾಗುತ್ತದೆ ಎಂದು ನ್ಯಾಯಾಲಯವು ನಿರ್ದೇಶಿಸಿರುವುದಾಗಿ ಎಸ್‌ಪಿಪಿ ಹೇಳಿದ್ದಾರೆ.
ನ್ಯಾಯಾಲಯವು ಅಪರಾಧಿಗೆ ₹4 ಲಕ್ಷ ದಂಡವನ್ನೂ ವಿಧಿಸಿದೆ. ಆ ಮೊತ್ತವನ್ನುಸಂತ್ರಸ್ತೆಗೆ ನೀಡಬೇಕೆಂದೂ ನ್ಯಾಯಾಲಯ ನಿರ್ದೇಶಿಸಿದೆ.
ಇದಲ್ಲದೆ, ಸಂತ್ರಸ್ತೆಗೆ ಹೆಚ್ಚುವರಿ ಪರಿಹಾರವನ್ನು ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಸಂತ್ರಸ್ತೆ ಮೇಲೆ ಆರೋಪಿಯು ಆಕೆಯ ನಿವಾಸದಲ್ಲೇ ಯಾರೂ ಇಲ್ಲದ ಸಮಯದಲ್ಲಿ ಅತ್ಯಾಚಾರ ಎಸಗಿದ್ದ. ಬಳಿಕ, ಬಾಲಕಿ ಗರ್ಭಿಣಿಯಾಗಿದ್ದಳು.
ವಿಚಾರಣೆಯ ಸಮಯದಲ್ಲಿ, ಆರೋಪಿ ತಪ್ಪಿತಸ್ಥನೆಂದು ನಿರ್ಧರಿಸಲು ನ್ಯಾಯಾಲಯವು 20 ಸಾಕ್ಷಿಗಳು ಮತ್ತು 35 ದಾಖಲೆಗಳನ್ನು ಪರಿಶೀಲಿಸಿತು ಎಂದು ಎಸ್‌ಪಿಪಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.