ADVERTISEMENT

ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮುಗಿಸಲು ಕಮ್ಯುನಿಸ್ಟ್ ಪ್ರಯತ್ನ: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 15:00 IST
Last Updated 24 ಮಾರ್ಚ್ 2021, 15:00 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ಕೊಚ್ಚಿ: ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮುಗಿಸಲು ಕಮ್ಯುನಿಸ್ಟ್ ಪಕ್ಷ ಪ್ರಯತ್ನಿಸುತ್ತಿದೆ. ಶಬರಿಮಲೆ ಅಯ್ಯಪ್ಪ ಭಕ್ತರ ವಿರುದ್ಧ ಎಲ್‌ಡಿಎಫ್ ಸರ್ಕಾರವು ಮಾಡಿದ ದೌರ್ಜನ್ಯ ಖಂಡನೀಯವಾಗಿದ್ದು, ದೇಶದ ಬೇರೆ ಯಾವುದೇ ಭಾಗಗಳಲ್ಲಿ ಇಂತಹ ದೃಶ್ಯಗಳು ಕಂಡಬರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಪರಾವೂರಿನ ಪುಟ್ಟಿಂಗಲ್ ದೇವಾಲಯದ ಮೈದಾನದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಭಾಷಣ ಮಾಡಿದ ಅಮಿತ್ ಶಾ, ದೇವಾಲಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬಾರದು ಮತ್ತು ಸಮಸ್ಯೆಗಳನ್ನು ನಿಭಾಯಿಸಲು ಭಕ್ತರಿಗೆ ಅವಕಾಶ ನೀಡಬೇಕು ಎಂಬುದರಲ್ಲಿ ಬಿಜೆಪಿ ನಂಬಿಕೆಯಿರಿಸಿದೆ ಎಂದು ಹೇಳಿದ್ದಾರೆ.

ಅದೇ ಹೊತ್ತಿಗೆ ರಾಜ್ಯವನ್ನು ಪರ್ಯಾಯವಾಗಿ ಆಳುತ್ತಿರುವ ಎಲ್‌ಡಿಎಫ್ ಹಾಗೂ ಯುಡಿಎಫ್ ಸರ್ಕಾರಗಳಿಂದಾಗಿ ಕೇರಳವು ಭ್ರಷ್ಟಾಚಾರದ ಕೇಂದ್ರವಾಗಿ ಮಾರ್ಪಾಟ್ಟಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಯುಡಿಎಫ್ ಅಧಿಕಾರಕ್ಕೆ ಬಂದಾಗ ಸೋಲರ್ ಹಗರಣ ಮತ್ತು ಎಲ್‌ಡಿಎಫ್ ಅಧಿಕಾರದಲ್ಲಿದ್ದಾಗ ಡಾಲರ್ ಮತ್ತು ಗೋಲ್ಡ್ ಹಗರಣ ನಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಚಿನ್ನದ ಕಳ್ಳಸಾಗಾಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಸಂಬಂಧವಿದೆ ಎಂದು ಶಾ ಆರೋಪಿಸಿದ್ದಾರೆ.

ಇದು ಶ್ರೀನಾರಾಯಣ ಗುರು, ಚಟ್ಟಂಬಿ ಸ್ವಾಮಿಗಳ್, ಅಯ್ಯಂಕಾಳಿ ಅವರ ನಾಡು. ಅದಕ್ಕಾಗಿಯೇ ದೇವರ ಸ್ವಂತ ನಾಡು ಎಂದು ಕರೆಯಲಾಗುತ್ತಿದೆ. ಆದರೆ ರಾಜ್ಯವನ್ನು ಪರ್ಯಾಯವಾಗಿ ಆಳುತ್ತಿರುವ ಎಲ್‌ಡಿಎಫ್ ಮತ್ತು ಯುಡಿಎಫ್ ಸರ್ಕಾರಗಳು ರಾಜ್ಯವನ್ನು ಹಾಳು ಮಾಡಿದೆ ಎಂದು ದೂರಿದರು.

ಕೇರಳವು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ್ದ ರಾಜ್ಯವಾಗಿತ್ತು. ಉನ್ನತ ಶಿಕ್ಷಣ ಪಡೆದ ರಾಜ್ಯ ಮತ್ತು ಜಾಗತಿಕ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು. ಆದರೆ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಆಡಳಿತದಿಂದಾಗಿ ಭ್ರಷ್ಟಾಚಾರದ ಕೇಂದ್ರವಾಗಿ ಮಾರ್ಪಾಟ್ಟಿದೆ. ಹಾಗಾಗಿ ರಾಜ್ಯದಲ್ಲಿ ಕಮಲ ಅರಳಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 'ಹೊಸ ಕೇರಳ'ವನ್ನಾಗಿ ಪರಿವರ್ತಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.