ವಿಶ್ವವಿದ್ಯಾಲಯ (ಪ್ರಾತಿನಿಧಿಕ ಚಿತ್ರ)
ನವದೆಹಲಿ: ಕೇರಳದ ಎ.ಪಿ.ಜೆ. ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಕೇರಳ ಡಿಜಿಟಲ್ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಕ್ರಿಯೆಯಿಂದ ಮುಖ್ಯಮಂತ್ರಿಯನ್ನು ಹೊರಗಿಡಲು ನಿರ್ದೇಶಿಸುವಂತೆ ಕೋರಿ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಯಾವುದೇ ವಿಶ್ವವಿದ್ಯಾಲಯಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿಗೆ ಯಾವುದೇ ಪಾತ್ರವನ್ನು ನೀಡಲಾಗಿಲ್ಲ ಎಂದು ರಾಜ್ಯಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಹೇಳಿದ್ದಾರೆ. ಇದಕ್ಕೆ ಪಶ್ಚಿಮ ಬಂಗಾಳ ರಾಜ್ಯ ಮತ್ತು ಡಾ. ಸನತ್ ಕುಮಾರ್ ಘೋಷ್ ಹಾಗೂ ಇತರರ ನಡುವಿನ ಪ್ರಕರಣವನ್ನು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಎ.ಪಿ.ಜೆ. ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಕಾಯ್ದೆ ಮತ್ತು ಕೇರಳ ಡಿಜಿಟಲ್ ವಿಶ್ವವಿದ್ಯಾಲಯ ಕಾಯ್ದೆಯಡಿ ಕುಲಪತಿಗಳ ನೇಮಕಾತಿ ವಿಷಯದಲ್ಲಿ ಉನ್ನತ ಶಿಕ್ಷಣ ಸಚಿವ ಅಥವಾ ಮುಖ್ಯಮಂತ್ರಿ ಪ್ರವೇಶಕ್ಕೆ ಯಾವುದೇ ಅವಕಾಶವಿಲ್ಲ ಎಂದಿದೆ.
ಈ ಎರಡೂ ವಿವಿಗಳಿಗೆ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನ್ಯಾಯಾಲಯ ರಚಿಸಿತ್ತು. ಈ ಸಮಿತಿಯು ನೇಮಕಾತಿಯಲ್ಲಿ ಮುಖ್ಯಮಂತ್ರಿ ಪಾತ್ರವಿದೆ ಎಂದಿತ್ತು.
‘ಆದರೆ ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ನಿಯಮದಂತೆ ರಾಜ್ಯ ಸರ್ಕಾರದಲ್ಲಿ ನಿರ್ಣಯ ತೆಗೆದುಕೊಳ್ಳುವ ವ್ಯಕ್ತಿ ನೇಮಕಾತಿಯಲ್ಲಿ ಇರುವುದು ಕಾನೂನು ಉಲ್ಲಂಘನೆ ಎಂದು ಹೇಳಿದೆ. ವಿಶ್ವವಿದ್ಯಾಲಯಗಳ ಅಧೀನಕ್ಕೆ ಒಳಪಡುವ ಸರ್ಕಾರಿ ಕಾಲೇಜುಗಳನ್ನು ರಾಜ್ಯ ಸರ್ಕಾರಗಳೇ ನಿರ್ವಹಿಸುತ್ತಿದ್ದು, ಅದಕ್ಕೆ ಮುಖ್ಯಮಂತ್ರಿಯೇ ಮುಖ್ಯಸ್ಥರಾಗಿರುತ್ತಾರೆ. ಹೀಗಾಗಿ ಕುಲಪತಿಯ ನೇಮಕಾತಿಯಲ್ಲಿ ಅವರು ಪಾಲ್ಗೊಳ್ಳುವಂತಿಲ್ಲ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಮತ್ತೊಂದೆಡೆ ರಾಜ್ಯಪಾಲರು ಶಿಫಾರಸು ಮಾಡಿರುವ ಹೆಸರುಗಳು ಯುಜಿಸಿ ನಿಯಮದಂತಿಲ್ಲ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.