ADVERTISEMENT

ಶಬರಿಮಲೆ: ಭಕ್ತರ ಸಂಖ್ಯೆ ಹೆಚ್ಚಳ ಆದೇಶ ವಿರುದ್ಧ ‘ಸುಪ್ರೀಂ’ಗೆ ಕೇರಳ ಸರ್ಕಾರ ಮೊರೆ

ಪಿಟಿಐ
Published 24 ಡಿಸೆಂಬರ್ 2020, 8:24 IST
Last Updated 24 ಡಿಸೆಂಬರ್ 2020, 8:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ತೀರ್ಥಯಾತ್ರೆಗೆ ತೆರಳುವ ಭಕ್ತರ ಸಂಖ್ಯೆಯನ್ನು 5000ದವರೆಗೆ ಹೆಚ್ಚಿಸಿ ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರವು ಸುಪ್ರೀಂಕೋರ್ಟ್‌ ಮೊರೆ ಹೋಗಿದೆ.

ಭಕ್ತರ ಸಂಖ್ಯೆ ಹೆಚ್ಚಿಸಿರುವುದು ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಅಧಿಕಾರಿಗಳ ಮೇಲೆ ತೀವ್ರ ಒತ್ತಡವನ್ನು ಹೇರಲಿದೆ ಎಂದು ಹೇಳಿದೆ.

ಡಿಸೆಂಬರ್‌ 26ರಿಂದ ಜನವರಿ 14 ತನಕ ನಡೆಯಲಿರುವ ವಾರ್ಷಿಕ ಮಂಡಲ-ಮಕರವಿಲಕ್ಕು ಕಾರ್ಯಕ್ರಮದ ನಿರ್ವಹಣೆಗಾಗಿಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಶಬರಿಮಲೆಯಲ್ಲಿ ತೀರ್ಥಯಾತ್ರಿಕರ ಸಂಖ್ಯೆಯನ್ನು ಪ್ರತಿ ದಿನ 2000 ಹಾಗೂ ವಾರಾಂತ್ಯದಲ್ಲಿ 3000ಕ್ಕೆ ಹೆಚ್ಚಿಸಿ ನಿಗದಿ ಮಾಡಿತ್ತು ಎಂದು ಕೇರಳ ಸರ್ಕಾರವು ಅರ್ಜಿಯಲ್ಲಿ ಹೇಳಿದೆ.

ADVERTISEMENT

ಡಿಸೆಂಬರ್ 20ರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ತೀರ್ಥಯಾತ್ರೆಗೆ ತೆರಳುವ ಭಕ್ತರ ಸಂಖ್ಯೆಯನ್ನು 5000ದ ವರೆಗೆ ಹೆಚ್ಚಿಸಿ ಕೇರಳ ಹೈಕೋರ್ಟ್ ಈಚೆಗೆ ಆದೇಶ ಹೊರಡಿಸಿತ್ತು.

ಪೊಲೀಸ್‌ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳ ಸಂಖ್ಯೆ, ಶಬರಿಮಲೆಯಲ್ಲಿರುವ ಕೋವಿಡ್‌ ಪೀಡಿತರ ಸಂಖ್ಯೆಯನ್ನೂ ಪರಿಗಣಿಸದೆ ಕೇರಳ ಹೈಕೋರ್ಟ್‌ ಈ ಆದೇಶವನ್ನು ಹೊರಡಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವರ್ಚುವಲ್‌ ಕ್ಯೂ ಮೂಲಕತೀರ್ಥಯಾತ್ರಿಕರು ದೇವಸ್ಥಾನದೊಳಗೆ ಬಿಡಲಾಗುವುದು. ಈ ವರ್ಚುವಲ್‌ ಕ್ಯೂ ವ್ಯವಸ್ಥೆಯನ್ನು ಪೊಲೀಸರು ನೋಡಿಕೊಳ್ಳಲಿದ್ದಾರೆ. ಭಕ್ತರು ದೇವಸ್ಥಾನದೊಳಗೆ ಪ್ರವೇಶಿಸುವುದಕ್ಕೂ ಮುನ್ನ, ಅವರನ್ನು ಕೋವಿಡ್‌ ಪರೀಕ್ಷೆಗೂ ಒಳಪಡಿಸಲಾಗುವುದು.

ಹಾಗಾಗಿ ಭಕ್ತರ ಸಂಖ್ಯೆಯನ್ನು ಹೆಚ್ಚಿಸಿದ್ದರೆ ಪೊಲೀಸ್‌ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳ ಮೇಲೆ ತುಂಬಾ ಒತ್ತಡ ಬೀಳುತ್ತದೆ. ಅಲ್ಲದೆ ಜನರನ್ನು ನಿಯಂತ್ರಿಸುವುದು ಬಹಳ ಕಷ್ಟವಾಗಲಿದೆ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.