ಕೊಚ್ಚಿ: ನ್ಯಾಯಾಲಯದ ವಿಚಾರಣಾ ಕೊಠಡಿಯಲ್ಲಿ ಪುನುಗು ಬೆಕ್ಕುಗಳು (ಸಿವೆಟ್) ಮೂತ್ರ ವಿಸರ್ಜನೆ ಮಾಡಿದ್ದರಿಂದ ದುರ್ವಾಸನೆ ಹರಡಿತು. ಹೀಗಾಗಿ ಮುಖ್ಯ ನ್ಯಾಯಮೂರ್ತಿ ಕಲಾಪವನ್ನು ಸ್ಥಗಿತಗೊಳಿಸಿದರು. ಕೇರಳ ಹೈಕೋರ್ಟ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ಕೊಠಡಿ ಪೂರ ದುರ್ವಾಸನೆ ಹಬ್ಬಿದ್ದ ಕಾರಣ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮದಾರ್ ಹಾಗೂ ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಮುಖ ಅರ್ಜಿಗಳನ್ನಷ್ಟೇ ವಿಚಾರಣೆ ಕೈಗೆತ್ತಿಕೊಂಡು, ಬೇರೆ ದಿನಾಂಕಗಳಿಗೆ ವಿಚಾರಣೆಯನ್ನು ನಿಗದಿಪಡಿಸಿತು.
ಕಳೆದ ಕೆಲವು ದಿನಗಳಿಂದಲೂ ಪುನುಗು ಬೆಕ್ಕುಗಳ ಮೂತ್ರ ವಿಸರ್ಜನೆ ಸಮಸ್ಯೆ ಶುರುವಾಗಿದ್ದು, ಸೋಮವಾರದಿಂದೀಚೆಗೆ ಇದು ತೀವ್ರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಿಗ್ಗೆ 11.30ರ ವೇಳೆಗೆ ವಿಚಾರಣೆ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ, ನ್ಯಾಯಾಲಯವನ್ನು ಸ್ವಚ್ಛಗೊಳಿಸಲು ನಿರ್ದೇಶಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.