ಬಂಧನ
(ಸಾಂದರ್ಭಿಕ ಚಿತ್ರ)
ಪತ್ತನಂತಿಟ್ಟ(ಕೇರಳ): ಜಿಲ್ಲೆಯಲ್ಲಿ ದಲಿತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 59 ಆರೋಪಿಗಳ ಪೈಕಿ 57 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿ.ಜಿ. ವಿನೋದ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಜನವರಿ 10ರಂದು ಇಳವುಂತಿಟ್ಟ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾದ ಸಮಯದಿಂದ ವಿದೇಶದಲ್ಲಿರುವ ಇಬ್ಬರನ್ನು ಹೊರತುಪಡಿಸಿ ಪಟ್ಟಿಯಲ್ಲಿರುವ ಎಲ್ಲ ಆರೋಪಿಗಳನ್ನು ಸಮಗ್ರ ತನಿಖೆಯ ಮೂಲಕ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿ ಜಿ ವಿನೋದ್ ಕುಮಾರ್ ತಿಳಿಸಿದ್ದಾರೆ.
25 ವರ್ಷದ ಯುವಕನನ್ನು ಇಂದು ಬೆಳಿಗ್ಗೆ ಅವರ ಮನೆಯ ಸಮೀಪದಲ್ಲಿಯೇ ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಮಹಿಳಾ ಐಪಿಎಸ್ ಅಧಿಕಾರಿ ಎಸ್. ಅಜಿತಾ ಬೇಗಂ ನೇತೃತ್ವದ ವಿಶೇಷ ತನಿಖಾ ತಂಡವು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ.
ಆರೋಪಿಗಳ ಹೇಳಿಕೆಗಳ ಆಧಾರದ ಮೇಲೆ 4 ಪೊಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ 30 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಆದಷ್ಟು ಬೇಗ ವಿಚಾರಣೆ ಮುಗಿಸಿ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಖಾಸಗಿ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಭೇಟಿ ಮಾಡುತ್ತಿದ್ದ ಆರೋಪಿಗಳು, ಬಳಿಕ ವಾಹನಗಳಲ್ಲಿ ಬೇರೆಡೆ ಕರೆದೊಯ್ದು ಅತ್ಯಾಚಾರ ಎಸಗುತ್ತಿದ್ದರು. ಕನಿಷ್ಠ ಐದು ಬಾರಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಸಂತ್ರಸ್ತೆಗೆ ಈಗ 18 ವರ್ಷವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಯುವತಿಯ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದ ಹಿನ್ನೆಲೆ ಶಿಕ್ಷಕರ ಮಾಹಿತಿ ಮೇರೆಗೆ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿ ನಡೆಸಿದ ಕೌನ್ಸೆಲಿಂಗ್‌ನಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.