ADVERTISEMENT

ಕೇರಳ: ಮಾಫಿ ಸಾಕ್ಷಿಗೆ ಬೆದರಿಕೆಯೊಡ್ಡಿದ ಆರೋಪ, ಶಾಸಕರ ಕಚೇರಿ ಸಿಬ್ಬಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 11:35 IST
Last Updated 24 ನವೆಂಬರ್ 2020, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಮಾಫಿ ಸಾಕ್ಷಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಕೇರಳದ ಶಾಸಕ ಕೆ.ಬಿ. ಗಣೇಶ್‌ ಕುಮಾರ್‌ ಅವರ ಕಚೇರಿ ಸಿಬ್ಬಂದಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪ್ರದೀಪ್‌ ಕೋಟ್ಟತ್ತಲ ಬಂಧಿತ ಆರೋಪಿ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಕಾಸರಗೋಡು ನಿವಾಸಿ ವಿಪಿನ್‌ಲಾಲ್‌ ಎಂಬುವವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಈತನನ್ನು ಕೊಲ್ಲಂ ಜಿಲ್ಲೆಯ ಪತ್ತನಾಪುರದಲ್ಲಿರುವ ಶಾಸಕರ ಕಚೇರಿಯಿಂದ ಬಂಧಿಸಲಾಗಿದೆ.

ಈತ ಬೆದರಿಕೆಯೊಡ್ಡಿರುವುದಾಗಿ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಇನ್ನೊಬ್ಬ ವ್ಯಕ್ತಿ ಕೂಡ ಆರೋಪಿಸಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಗಣೇಶ್‌ ಕುಮಾರ್‌, ಪ್ರದೀಪ್‌ನನ್ನು ತಮ್ಮ ಕಚೇರಿಯಿಂದ ಹೊರಹಾಕಲಾಗಿದೆ ಎಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ. ಗಣೇಶ್‌ ಅವರು ಕೇರಳದ ಆಡಳಿತಾರೂಢ ಎಲ್‌ಡಿಎಫ್‌ ಮೈತ್ರಿಕೂಟದ ಬೆಂಬಲಿಗ ಶಾಸಕರಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದಿಲೀಪ್ ಮತ್ತು ಗಣೇಶ್‌ ಕುಮಾರ್‌ ಆಪ್ತರಾಗಿದ್ದು, ದಿಲೀಪ್‌ ಸೂಚನೆಯ ಮೇರೆಗೆ ಸಾಕ್ಷಿಗೆ ಬೆದರಿಕೆಯೊಡ್ಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಪಲ್ಸರ್‌ ಸುನಿ ಹಾಗೂ ಇತರ ಆರೋಪಿಗಳ ಜೊತೆ ನಂಟು ಹೊಂದಿರುವ ಆರೋಪದಲ್ಲಿ ವಿಪಿನ್‌ಲಾಲ್‌ನನ್ನು ಆರಂಭದಲ್ಲಿ ಆರೋಪಿಯನ್ನಾಗಿಸಲಾಗಿತ್ತು.

ಆರೋಪಿಗಳ ವಿರುದ್ಧ ಹೇಳಿಕೆ ನೀಡಿರುವ ಕಾರಣ, ಪ್ರದೀಪ್‌ ಫೋನ್‌ ಹಾಗೂ ಪತ್ರಗಳ ಮೂಲಕ ತನಗೆ ಬೆದರಿಕೆಯೊಡ್ಡಿರುವುದಾಗಿ ವಿಪಿನ್‌ಲಾಲ್‌ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು.

ನಿರೀಕ್ಷಣಾ ಜಾಮೀನಿಗಾಗಿ ಪ್ರದೀಪ್‌ ಸಲ್ಲಿಸಿದ್ದ ಅರ್ಜಿಯನ್ನು ಕಾಸರಗೋಡಿನ ಸ್ಥಳೀಯ ನ್ಯಾಯಾಲಯ ವಜಾಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.