ADVERTISEMENT

ತಪ್ಪು ಸಂದೇಶ: ಫೇಸ್‌ಬುಕ್‌ಗೆ ದೂರು ನೀಡಿದ ಐಎಎಸ್ ಅಧಿಕಾರಿ ಶ್ರೀಧನ್ಯಾ

ಐಎಎಸ್‌ನಲ್ಲಿ ತೇರ್ಗಡೆಯಾಗಿರುವ ಬುಡಕಟ್ಟು ಯುವತಿ

​ಪ್ರಜಾವಾಣಿ ವಾರ್ತೆ
Published 7 ಮೇ 2020, 20:38 IST
Last Updated 7 ಮೇ 2020, 20:38 IST

ತಿರುವನಂತಪುರ: ‘ಮೀಸಲಾತಿ ಸೌಲಭ್ಯವನ್ನು ಪಡೆಯದೆಯೇ ಶ್ರೀಧನ್ಯಾ ಸುರೇಶ್‌ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ’ ಎಂಬ ಪೋಸ್ಟ್‌ವೊಂದು ಹರಿದಾಡುತ್ತಿದ್ದು, ಈ ಕುರಿತು ಕೋಯಿಕ್ಕೋಡ್‌ನ ಉಪಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಅವರು ಫೇಸ್‌ಬುಕ್‌ಗೆ ದೂರು ನೀಡಿದ್ದಾರೆ.

ವಯನಾಡ ಜಿಲ್ಲೆಯ ಕುರಿಚಿಯಾ ಬುಡಕಟ್ಟು ಜನಾಂಗದ ಶ್ರೀಧನ್ಯಾ, ಐಎಎಸ್‌ನಲ್ಲಿ ಸಾಧನೆ ಮಾಡಿದ ಈ ಜನಾಂಗದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

‘ಮೀಸಲಾತಿ ಸೌಲಭ್ಯವನ್ನು ಪಡೆಯದೆಯೇ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣಳಾಗುತ್ತೇನೆ ಎಂಬ ಆತ್ಮವಿಶ್ವಾಸ ನನ್ನಲ್ಲಿ ಇತ್ತು. ಹೀಗಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಯಾಗಿ ಪರೀಕ್ಷೆ ಎದುರಿಸಿ ಈ ಸಾಧನೆ ಮಾಡಿದ್ದೇನೆ’ ಎಂಬುದಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು, ಅದು ವೈರಲ್‌ ಆಗಿದೆ. ಶ್ರೀಧನ್ಯಾ ಅವರು ನೀಡಿದ್ದಾರೆನ್ನಲಾದ ಹೇಳಿಕೆ ಮತ್ತು ಅವರ ಚಿತ್ರವೂ ಈ ಪೋಸ್ಟ್‌ನಲ್ಲಿದೆ.

ADVERTISEMENT

‘ಮೀಸಲಾತಿಯಿಂದಾಗಿ ಎಲ್ಲ ಸವಲತ್ತುಗಳು ಸಿಗುವ ಕಾರಣ, ಹೆಚ್ಚು ಪ್ರಯತ್ನಪಡುವ ಅಗತ್ಯ ಇಲ್ಲ ಎಂಬುದಾಗಿ ಹಲವಾರು ಜನರು ಶ್ರೀಧನ್ಯಾ ಅವರಿಗೆ ಹೇಳುತ್ತಿದ್ದರು’ ಎಂಬುದಾಗಿಯೂ ಬರೆಯಲಾಗಿದೆ. ಇದರ ಬೆನ್ನಲ್ಲೇ, ಮೀಸಲಾತಿ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯೂ ಆರಂಭವಾಗಿದೆ.

‘ಇದು ತಪ್ಪು ಮಾಹಿತಿಯಿಂದ ಕೂಡಿದ ಪೋಸ್ಸ್‌. ನಾನು ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಫೇಸ್‌ಬುಕ್‌ಗೆ ದೂರು ನೀಡಿದ್ದೇನೆ. ಶೀಘ್ರವೇ ಆ ಪೋಸ್ಟ್‌ಅನ್ನು ತೆಗೆದುಹಾಕುವ ನಿರೀಕ್ಷೆ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.