ADVERTISEMENT

ಉಗ್ರರಿಗೆ ಶೋಧ: ಕಾರ್ಯಾಚರಣೆ ತೀವ್ರಗೊಳಿಸಿದ ಭದ್ರತಾ ಪಡೆಗಳು

ಪಿಟಿಐ
Published 7 ಮೇ 2024, 12:41 IST
Last Updated 7 ಮೇ 2024, 12:41 IST
–
   

ಜಮ್ಮು: ವಾಯುಪಡೆಯ ಬೆಂಗಾವಲು ಪಡೆ ಮೇಲೆ ನಡೆದಿದ್ದ ದಾಳಿಗೆ ಸಂಬಂಧಿಸಿ ಜಮ್ಮುವಿನ ಗಡಿ ಜಿಲ್ಲೆಗಳಾದ ಪೂಂಚ್‌ ಮತ್ತು ರಜೌರಿಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯವನ್ನು ತೀವ್ರಗೊಳಿಸಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಈ ಎರಡು ಜಿಲ್ಲೆಗಳಲ್ಲಿ ಮಾತ್ರವಲ್ಲ, ದೋಡಾ, ಉಧಂಪುರ ಹಾಗೂ ಕಠುವಾ ಜಿಲ್ಲೆಗಳಿಗೂ ಶೋಧಕಾರ್ಯವನ್ನು ಪಡೆಗಳು ವಿಸ್ತರಿಸಿದ್ದು, ಬೆಂಗಾವಲು ಪಡೆ ಮೇಲಿನ ದಾಳಿ ನಡೆಸಿರುವ ಭಯೋತ್ಪಾದಕರ ಎರಡು ಗುಂಪುಗಳ ಪತ್ತೆ ಕಾರ್ಯವನ್ನು ತೀವ್ರಗೊಳಿಸಿವೆ.

ಡ್ರೋನ್‌ಗಳು, ಮಾದಕವಸ್ತುಗಳು ಮತ್ತು ಸ್ಫೋಟಕಗಳನ್ನು ಪತ್ತೆ ಮಾಡುವ ಶ್ವಾನಗಳನ್ನು ಬಳಸಿ ನಡೆಸುತ್ತಿರುವ ಈ ಕಾರ್ಯಾಚರಣೆ ಮಂಗಳವಾರ ನಾಲ್ಕನೇ ದಿನ ಪೂರೈಸಿತು.

ADVERTISEMENT

ಘಟನೆಗೆ ಸಂಬಂಧಿಸಿ 22 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಸಿ.ಸಿ.ಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್‌ 28ರಂದು ಬಸನ್‌ಗಡದಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ, ಉಗ್ರರು ಗ್ರಾಮ ರಕ್ಷಣಾ ಸಿಬ್ಬಂದಿಯೊಬ್ಬರನ್ನು (ವಿಡಿಜಿ) ಹತ್ಯೆ ಮಾಡಿದ್ದರು. ಶಾಯಿಸ್ತಾರ್ ಎಂಬಲ್ಲಿ ವಾಯುಪಡೆ ಬೆಂಗಾವಲು ಪಡೆ ಗುರಿಯಾಗಿಸಿ ನಡೆದಿದ್ದ ದಾಳಿಯಲ್ಲಿ ಅಧಿಕಾರಿಯೊಬ್ಬರು ಮೃತಪಟ್ಟು, ಇತರ ನಾಲ್ವರಿಗೆ ಗಾಯಗಳಾಗಿದ್ದವು.

ಪ್ರಮುಖ ಶಂಕಿತರ ಕುರಿತು ಸುಳಿವು ನೀಡಿದವರಿಗೆ ₹20 ಲಕ್ಷ ಬಹುಮಾನ ಘೋಷಿಸಿರುವ ಭದ್ರತಾ ಪಡೆಗಳು, ಈ ಸಂಬಂಧ ಸುರಾನ್‌ಕೋಟ್‌ ಪ್ರದೇಶದಲ್ಲಿ ‍ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.