ADVERTISEMENT

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೃಹತ್‌ ಕಿಸಾನ್‌–ಮಜ್ದೂರ್‌ ಸಂಘರ್ಷ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 10:35 IST
Last Updated 5 ಸೆಪ್ಟೆಂಬರ್ 2018, 10:35 IST
   

ನವದೆಹಲಿ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾವಿರಾರು ಜನ ರೈತರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ರಾಮಲೀಲಾ ಮೈದಾನದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ವಿವಿಧ ರಾಜ್ಯಗಳಿಂದ ಆಗಮಿಸಿದ್ದ ರೈತರು, ಕಾರ್ಯರ್ಕತೆಯರು, ಸಂಘಟನೆಗಳ ಕಾರ್ಯಕರ್ತರು ಸಂಸತ್‌ ರಸ್ತೆಯಲ್ಲಿ ಬೃಹತ್ ರ್‍ಯಾಲಿ ನಡೆಸಿದರು. ಬಳಿಕ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕಾರ್ಮಿಕರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು, ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ, ಕನಿಷ್ಠ ₹18 ಸಾವಿರ ನಿಗದಿತ ವೇತನ, ಆಹಾರ ಭದ್ರತೆ, ಉದ್ಯೋಗ ಸೃಷ್ಟಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ADVERTISEMENT

ಭಾರತೀಯ ಕಮ್ಯೂನಿಸ್ಟ್ ಪಕ್ಷ (ಎಂ), ಸಿಐಟಿಯು, ಎಐಕೆಎಸ್, ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ ಹಾಗೂ ಮಹಾರಾಷ್ಟ್ರದ ಕಿಸಾನ್ ಮೊರ್ಚಾ ಸಂಸ್ಥೆಗಳ ಮುಖಂಡರು ಮತ್ತು ಕಾರ್ಯಕರ್ತರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದೆಹಲಿಯಲ್ಲಿ ಕಳೆದೊಂದು ದಶಕದಲ್ಲೇ ನಡೆದ ಬೃಹತ್ ಪ್ರತಿಭಟನೆ ಇದಾಗಿದೆ. ಕೆಂಪು ಬಾವುಟಗಳನ್ನು ಹಿಡಿದಿದ್ದ ಸಾವಿರಾರು ಜನರು ಕಿಸಾನ್‌–ಮಜ್ದೂರ್‌ ಸಂಘರ್ಷ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಸಂಸತ್‌ ರಸ್ತೆಯ ಒಂದು ಕಿಲೋ ಮೀಟರ್‌ವರೆಗೂ ಪ್ರತಿಭಟನಾಕಾರರು ಸಾಲುಗಟ್ಟಿ ನಿಂತಿದ್ದರು.

ಸಿಪಿಐ(ಎಂ)ನ ಸೀತಾರಾಂ ಯೆಚೂರಿ, ಕಿಸಾನ್‌ ಸಭಾದ ಅಶೋಶ್‌ ದಾವಳೆ, ಸಿಐಟಿಯುನ ಕಾ.ಹೇಮಲತಾ ಸೇರಿದಂತೆ ಹಲವರು ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ಬೃಹತ್‌ರ್‍ಯಾಲಿ ಹಿನ್ನೆಲೆಯಲ್ಲಿ ಪೋಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.