ಚಿಸೌತಿ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕಿಶ್ತವಾಡ ಜಿಲ್ಲೆಯಲ್ಲಿ ನಡೆದ ಮೇಘಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 61ಕ್ಕೆ ಏರಿದೆ. ರಕ್ಷಣಾ ಕಾರ್ಯ ನಾಲ್ಕನೇ ದಿನವೂ ಮುಂದುವರಿದಿದೆ. ದುರಂತ ನಡೆದ ಪ್ರದೇಶದ ಸುತ್ತ ಮೂರು ಸ್ಫೋಟಗಳನ್ನು ನಡೆಸಿ ದೊಡ್ಡ ಕಲ್ಲುಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಸೌತಿ ಮತ್ತು ಮಚೈಲ್ ಮಾತಾ ದೇವಾಲಯಕ್ಕೆ ಸಂಪರ್ಕ ಪುನರ್‌ಸ್ಥಾಪಿಸಲು ಮತ್ತು ರಕ್ಷಣಾ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲು ಸೇನಾ ಎಂಜಿನಿಯರ್‌ಗಳು ಕಬ್ಬಿಣದ ಸೇತುವೆಯ ಕೆಲಸ ಪ್ರಾರಂಭಿಸಿದ್ದಾರೆ. ಜುಲೈ 25ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 5ರಂದು ಕೊನೆಗೊಳ್ಳಬೇಕಿದ್ದ ವಾರ್ಷಿಕ ಮಚೈಲ್ ಮಾತಾ ಯಾತ್ರೆಯನ್ನು ಭಾನುವಾರವೂ ಸ್ಥಗಿತಗೊಳಿಸಲಾಯಿತು.
ಆಗಸ್ಟ್ 14ರಂದು ಮಚೈಲ್ ಮಾತಾ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿರುವ ವಾಹನ ಚಲಿಸಲು ಯೋಗ್ಯವಾದ ರಸ್ತೆಯಿರುವ ಕೊನೆಯ ಗ್ರಾಮ ಚಿಸೋಟಿಯಲ್ಲಿ ಮೇಘಸ್ಫೋಟ ಸಂಭವಿಸಿತ್ತು. ಈ ವೇಳೆ ಮೃತರನ್ನು ಹೊರತುಪಡಿಸಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ನಾಪತ್ತೆಯಾದವರ ಸಂಖ್ಯೆ 50ಕ್ಕೆ ಇಳಿದಿದ್ದು, ಮೂವರ ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ.
9,500 ಅಡಿ ಎತ್ತರದಲ್ಲಿರುವ ಮಚೈಲ್ ಮಾತಾ ದೇಗುಲಕ್ಕೆ 8.5 ಕಿ.ಮೀ. ಚಾರಣದ ಮೂಲಕ ತೆರಳಬೇಕಿದೆ. ಚಾರಣವು ಕಿಶ್ತವಾಡ ಪಟ್ಟಣದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಚಿಸೌತಿಯಿಂದ ಪ್ರಾರಂಭವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.