ADVERTISEMENT

ದೇಶವ್ಯಾಪಿ ವೈದ್ಯರ ಮುಷ್ಕರ ಯಶಸ್ವಿ, ಬೇಡಿಕೆಗಳಿಗೆ ಮಮತಾ ಒಪ್ಪಿಗೆ

ಬಂಗಾಳದಲ್ಲಿ ಅನಿರ್ದಿಷ್ಟ ಮುಷ್ಕರ ಅಂತ್ಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 20:15 IST
Last Updated 17 ಜೂನ್ 2019, 20:15 IST
ಕರ್ತವ್ಯನಿರತ ವೈದ್ಯರಿಗೆ ಭದ್ರತೆ ಕೋರಿ ಐಎಂಎ ಕರೆಯಂತೆ ಸೋಮವಾರ ಚೆನ್ನೈನ ಎಗ್‌ಮೊರೆ ಸರ್ಕಾರಿಮಕ್ಕಳ ಆಸ್ಪತ್ರೆಯಲ್ಲಿ ಪ್ರತಿಭಟಿಸಿದ ವೈದ್ಯರು ಬೇಡಿಕೆ ಕುರಿತು ಸರ್ಕಾರದ ಗಮನಸೆಳೆಯಲು ಸಾಂಕೇತಿಕವಾಗಿ ಹೆಲ್ಮೆಟ್ ಧರಿಸಿದ್ದರು
ಕರ್ತವ್ಯನಿರತ ವೈದ್ಯರಿಗೆ ಭದ್ರತೆ ಕೋರಿ ಐಎಂಎ ಕರೆಯಂತೆ ಸೋಮವಾರ ಚೆನ್ನೈನ ಎಗ್‌ಮೊರೆ ಸರ್ಕಾರಿಮಕ್ಕಳ ಆಸ್ಪತ್ರೆಯಲ್ಲಿ ಪ್ರತಿಭಟಿಸಿದ ವೈದ್ಯರು ಬೇಡಿಕೆ ಕುರಿತು ಸರ್ಕಾರದ ಗಮನಸೆಳೆಯಲು ಸಾಂಕೇತಿಕವಾಗಿ ಹೆಲ್ಮೆಟ್ ಧರಿಸಿದ್ದರು   

ಕೋಲ್ಕತ್ತ: ಸಹೋದ್ಯೋಗಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಭದ್ರತೆಯನ್ನು ಕೋರಿ ಕಿರಿಯ ವೈದ್ಯರು ಏಳು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ನಡೆಸುತ್ತಿದ್ದ ಮುಷ್ಕರ ಸೋಮವಾರ ಕೊನೆಗೊಂಡಿತು.

ಇನ್ನೊಂದೆಡೆ, ಕೋಲ್ಕತ್ತದ ವೈದ್ಯರಿಗೆ ಬೆಂಬಲ ವ್ಯಕ್ತಪಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆಯ (ಐಎಂಎ) ಕರೆಯಂತೆ ದೇಶವ್ಯಾಪಿ ನಡೆದ ಒಂದು ದಿನದ ಮುಷ್ಕರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಅನೇಕ ಕಡೆಗಳಲ್ಲಿ ರೋಗಿಗಳು ಪರದಾಡುವಂತಾಯಿತು.

ಕೋಲ್ಕತ್ತದ ಹೌರಾ ಬಳಿ ಇರುವ ಸರ್ಕಾರಿ ಸಚಿವಾಲಯದ ಕಟ್ಟಡದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆಗೆ ವೈದ್ಯರ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸುಮಾರು ಎರಡೂವರೆ ಗಂಟೆ ಚರ್ಚಿಸಿದರು.

ADVERTISEMENT

ವೈದ್ಯರನ್ನು ಕುರಿತ ತಮ್ಮ ಬಿಗಿ ನಿಲುವನ್ನು ಸಡಿಲಿಸಿದ ಮುಖ್ಯಮಂತ್ರಿ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ದೂರು ಪರಿಹಾರ ಕೇಂದ್ರ’ ಸ್ಥಾಪನೆ ಸೇರಿದಂತೆ ಎಲ್ಲ ಬೇಡಿಕೆಗಳನ್ನೂ ಸರ್ಕಾರ ಈಡೇರಿಸಲಿದೆ’ ಎಂದು ಭರವಸೆ ನೀಡಿದರು. ಇದಾದ ಬಳಿಕ ಪ್ರತಿಭಟನೆ ಕೈಬಿಡುವ ನಿರ್ಧಾರ ಪ್ರಕಟಿಸಿದ ವೈದ್ಯರು, ‘ಮುಖ್ಯಮಂತ್ರಿಗಳು ಸಭೆಯ ತೀರ್ಮಾನಗಳನ್ನು ಶೀಘ್ರ ಜಾರಿಗೊಳಿಸಬೇಕು. ನಾವು ಎಷ್ಟು ಸಾಧ್ಯವೋ ಅಷ್ಟು ಬೇಗ ಕರ್ತವ್ಯಕ್ಕೆ ಮರಳುತ್ತೇವೆ’ ಎಂದರು.

ಉತ್ತಮ ಸ್ಪಂದನೆ:

ಪಶ್ಚಿಮ ಬಂಗಾಳದ ವೈದ್ಯರಿಗೆ ಬೆಂಬಲ ವ್ಯಕ್ತಪಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆಯ (ಐಎಂಎ) ಕರೆಯಂತೆ ವಿವಿಧ ರಾಜ್ಯಗಳಲ್ಲಿಯೂ ವೈದ್ಯರು ಸೋಮವಾರ ಮುಷ್ಕರ ನಡೆಸಿದರು. ತುರ್ತು ಚಿಕಿತ್ಸೆ, ಅಪಘಾತ ಚಿಕಿತ್ಸಾ ಘಟಕ ಹೊರತುಪಡಿಸಿ ಉಳಿದ ಸೇವೆಗಳು ಬಂದ್‌ ಆಗಿದ್ದವು. ಮುಷ್ಕರದ ಮಾಹಿತಿಯಿಲ್ಲದೆ ಆಸ್ಪತ್ರೆಗೆ ಬಂದಿದ್ದ ರೋಗಿಗಳು, ಅವರ ಸಂಬಂಧಿಕರು ಪರದಾಡುವಂತಾಯಿತು.

ಪ್ರತ್ಯೇಕ ಕಾಯ್ದೆಗೆ ಚಿಂತನೆ: ‘ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕಾಯ್ದೆ ರೂಪಿಸಲು ಕೇಂದ್ರ ಒತ್ತು ನೀಡಲಿದೆ’ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಸೋಮವಾರ ಭರವಸೆ ನೀಡಿದರು.

ಭದ್ರತೆಗೆ ಆಗ್ರಹಪಡಿಸಿ ವೈದ್ಯರು ದೇಶವ್ಯಾಪಿ ಮುಷ್ಕರ ನಡೆಸಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ‘ಪ್ರತ್ಯೇಕ ಕಾಯ್ದೆ ರೂಪಿಸಲು ಒತ್ತುನೀಡಬೇಕು ಎಂದು ಈಗಾಗಲೇ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ’ ಎಂದರು.

ಸುಪ್ರೀಂ ಕೋರ್ಟ್‌ಗೆ ಅರ್ಜಿ: ವೈದ್ಯರಿಗೆ ರಕ್ಷಣೆ ಒದಗಿಸಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮವಸ್ತ್ರದಲ್ಲಿರುವ ಭದ್ರತಾ ಸಿಬ್ಬಂದಿ ನಿಯೋಜಿಸಲು ನಿರ್ದೇಶಿಸಬೇಕು ಎಂಬ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ಸಮ್ಮತಿಸಿತು.

ವಕೀಲ ಎ. ಅಲೋಕ್ ಶ್ರೀವಾಸ್ತವ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಮತ್ತು ಸೂರ್ಯಕಾಂತ ಅವರಿದ್ದ ಪೀಠ ಜೂನ್‌ 18ಕ್ಕೆ ನಿಗದಿಪಡಿಸಿತು. ಕೋಲ್ಕತ್ತದ ಘಟನೆಯನ್ನು ಉಲ್ಲೇಖಿಸಿದ್ದ ವಕೀಲ ಶ್ರೀವಾಸ್ತವ್‌, ‘ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಮೇಲಿನ ಹಲ್ಲೆ ತಡೆಗೆ ‘ಸೂಕ್ತ ಮಾರ್ಗದರ್ಶನ, ಕಾಯ್ದೆ, ನಿಯಮ’ಗಳನ್ನು ರೂಪಿಸಲು ನಿರ್ದೇಶನ ನೀಡಬೇಕು’ ಎಂದು ಕೋರಿದ್ದರು.

ಲಖನೌ ವೈದ್ಯರಿಂದ ದಾಂದಲೆ

ಸುಗಂಧದ್ರವ್ಯ ಖರೀದಿಸುವ ವಿಷಯದಲ್ಲಿ ಮಾತಿನ ಚಕಮಕಿಗೆ ನಡೆದು, ಕಿರಿಯ ವೈದ್ಯರ ತಂಡವೊಂದು ಅಂಗಡಿಯಲ್ಲಿ ದಾಂದಲೆ ನಡೆಸಿ ಮಾಲೀಕ, ಸಹಾಯಕನ ಮೇಲೆ ಹಲ್ಲೆ ಮಾಡಿದ ಘಟನೆ ವರದಿಯಾಗಿದೆ.

ಇಲ್ಲಿನ ರಾಮಮನೋಹರ ಲೋಹಿಯಾ ವೈದ್ಯ ಕಾಲೇಜು ಮತ್ತು ಆಸ್ಪತ್ರೆ ಬಳಿ ಇರುವ ಜನರಲ್‌ ಸ್ಟೋರ್‌ನಲ್ಲಿ ಘಟನೆ ನಡೆದಿದ್ದು, ದಾಂದಲೆ ಮಾಡಿದ ವೈದ್ಯರು ಕೆಲ ವಸ್ತುಗಳನ್ನು ದೋಚಿದ್ದಾರೆ.

ಮೂಲಗಳ ಪ್ರಕಾರ, ಅಂಗಡಿಗೆ ಸುಗಂಧದ್ರವ್ಯ ಖರೀದಿಸಲು ವೈದ್ಯರೊಬ್ಬರು ಹೋಗಿದ್ದಾರೆ. ಖರೀದಿಗೆ ಮುನ್ನ ಅದರ ಗುಣಮಟ್ಟವನ್ನು ಪರೀಕ್ಷಿಸಲು ಮುಂದಾಗಿದ್ದಾರೆ. ಇದು, ಮಾತಿನ ಚಕಮಕಿಗೆ ಕಾರಣವಾಗಿದೆ. ಇದರಿಂದ ಆಕ್ರೋಶಗೊಂಡ ವೈದ್ಯ, ತನ್ನ ಗೆಳೆಯರನ್ನೂ ಸ್ಥಳಕ್ಕೆ ಕರೆಯಿಸಿಕೊಂಡು ಮಾಲೀಕ ಮತ್ತು ಸಹಾಯಕನ ಮೇಲೆ ಹಲ್ಲೆ ನಡಸಿದರು. ಕೆಲ ವಸ್ತುಗಳನ್ನು ದೋಚಿದರು.

ವೈದ್ಯರ ಕೃತ್ಯವನ್ನು ಖಂಡಿಸಿ ಸ್ಥಳೀಯ ವ್ಯಾಪಾರಿಗಳು ಅಂಗಡಿ ಬಂದ್‌ ಮಾಡಿ ಆಕ್ರೋಶವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.