ADVERTISEMENT

ಸಂಧಾನಕ್ಕೆ ಬದ್ಧ: ಅಧಿಕಾರಿಗಳ ವರ್ಗ; ಪಶ್ಚಿಮ ಬಂಗಾಳ ಸರ್ಕಾರದಿಂದ ಹಲವು ಬದಲಾವಣೆ

ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ–ಕೊಲೆ ಪ್ರಕರಣ

ಪಿಟಿಐ
Published 17 ಸೆಪ್ಟೆಂಬರ್ 2024, 16:35 IST
Last Updated 17 ಸೆಪ್ಟೆಂಬರ್ 2024, 16:35 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ಕೋಲ್ಕತ್ತ: ಪ್ರತಿಭಟನೆನಿರತ ಕಿರಿಯ ವೈದ್ಯರ ಜೊತೆಗೆ ಸೋಮವಾರ ನಡೆದ ಸಂಧಾನಕ್ಕೆ ಅನುಗುಣವಾಗಿ ಆಡಳಿತ ವ್ಯವಸ್ಥೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಹಲವು ಬದಲಾವಣೆಗಳನ್ನು ಮಂಗಳವಾರ ಮಾಡಿದೆ. ಪೊಲೀಸ್‌, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಲ್ಲಿನ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಹಿರಿಯ ಪೊಲೀಸ್‌ ಅಧಿಕಾರಿ ಮನೋಜ್‌ ಕುಮಾರ್‌ ವರ್ಮಾ ಅವರನ್ನು ಕೋಲ್ಕತ್ತದ ನೂತನ ಪೊಲೀಸ್‌ ಕಮಿಷನರ್‌ ಆಗಿ ನೇಮಕ ಮಾಡಲಾಗಿದೆ. 1998ರ ಬ್ಯಾಚ್‌ನ ಅಧಿಕಾರಿ ವರ್ಮಾ, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಮತ್ತು ಐಜಿಪಿ ಆಗಿದ್ದರು.

ಈ ಕುರಿತು ಅಧಿಸೂಚನೆ ಹೊರಡಿಸಿರುವ ಪಶ್ಚಿಮ ಬಂಗಾಳ ಸರ್ಕಾರ, ಐಪಿಎಸ್‌ ಅಧಿಕಾರಿ ವಿನೀತ್‌ ಗೋಯಲ್‌ ಅವರನ್ನು ಆ ಹುದ್ದೆಯಿಂದ ತೆಗೆದುಹಾಕಿದೆ.

ADVERTISEMENT

ವೈದ್ಯಕೀಯ ಶಿಕ್ಷಣ ನಿರ್ದೇಶಕರಾಗಿದ್ದ ಡಾ.ಕೌಸ್ತವ ನಾಯಕ್‌ ಹಾಗೂ ಆರೋಗ್ಯ ಸೇವೆಗಳ ನಿರ್ದೇಶಕ ಡಾ.ದೇಬಶಿಶ್ ಹಲ್ದರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಡಾ.ಸ್ವಪನ್ ಸೊರೇನ್‌ ಅವರನ್ನು ಆರೋಗ್ಯ ಸೇವೆಗಳ ಪ್ರಭಾರಿ ನಿರ್ದೇಶಕರನ್ನಾಗಿ, ಡಾ.ಸುಪರ್ಣ ದತ್ತಾ ಅವರನ್ನು ವೈದ್ಯಕೀಯ ಶಿಕ್ಷಣದ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಆಕೆಯ ಕೊಲೆ ವಿಚಾರವಾಗಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿರುವ ವೈದ್ಯರೊಂದಿಗೆ ಸಭೆ ನಡೆಸಿದ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಡರಾತ್ರಿ ಈ ಕುರಿತು ಪ್ರಕಟಿಸಿದ್ದರು.

ಗೋಯಲ್‌ ಅವರನ್ನು ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ ಎಡಿಜಿ ಮತ್ತು ಐಜಿಪಿಯಾಗಿ ವರ್ಗ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಮತ್ತು ಐಜಿಪಿಯಾಗಿ 1995ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಜಾವೇದ್‌ ಶಮೀಮ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ಸಂತ್ರಸ್ತೆ ಚಿತ್ರ ಹೆಸರು ತೆಗೆಯಿರಿ’

ಅತ್ಯಾಚಾರ ಮತ್ತು ಹತ್ಯೆಗೆ ಒಳಗಾದ ವೈದ್ಯ ವಿದ್ಯಾರ್ಥಿನಿಯ ಚಿತ್ರ ಮತ್ತು ಹೆಸರನ್ನು ತೆಗೆದು ಹಾಕುವಂತೆ ವಿಕಿಪೀಡಿಯಾಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ. ಸಂತ್ರಸ್ತೆಯ ಚಿತ್ರ ಮತ್ತು ಹೆಸರು ಉಚಿತ ಆನ್‌ಲೈನ್‌ ವಿಶ್ವಕೋಶ ‘ವಿಕಿಪೀಡಿಯಾ’ದಲ್ಲಿ ಇನ್ನೂ ಇದೆ ಎಂಬುದಾಗಿ ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಅವರು ಹೇಳಿದಾಗ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ‘ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವಂತಿಲ್ಲ. ಈ ಕುರಿತ ಕಾನೂನುಗಳಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ’ ಎಂದು ನ್ಯಾಯಪೀಠ ಹೇಳಿದೆ. ‘ಈ ವಿಚಾರವಾಗಿ ಈ ಹಿಂದೆ ನೀಡಿರುವ ಆದೇಶದ ಅನುಸಾರ ವಿಕಿಪೀಡಿಯಾ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರೂ ಇದ್ದ ಪೀಠ ಹೇಳಿದೆ.

‘ತನಿಖಾ ವರದಿಯಲ್ಲಿನ ಅಂಶಗಳು ವೇದನಾದಾಯಕ’

ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿ ಸಿಬಿಐ ಸಲ್ಲಿಸಿರುವ ತನಿಖೆಯ ಸ್ಥಿತಿಗತಿ ವರದಿಯಲ್ಲಿನ ಅಂಶಗಳು ಮನ ಕಲಕುವಂತಿವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ವರದಿಯ ಅಂಶಗಳನ್ನು ಬಹಿರಂಗಪಡಿಸಿದರೆ ತನಿಖೆಗೆ ತೊಂದರೆಯಾಗಬಹುದು ಎಂದ ಸುಪ್ರೀಂ ಕೋರ್ಟ್‌ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಸಿಬಿಐ ತನಿಖೆಯ ಭಾಗವಾಗಿ ಜಪ್ತಿ ಮಾಡಿಕೊಂಡಿರುವ ವಸ್ತುಗಳ ಪಟ್ಟಿ ಹಾಗೂ ಅಪರಾಧ ಕೃತ್ಯ ಬಿಂಬಿಸುವ ಚಿತ್ರದಲ್ಲಿ ವ್ಯತ್ಯಾಸಗಳಿವೆ ಎಂಬ ಅರ್ಜಿದಾರರೊಬ್ಬರ ವಕೀಲರ ಮಾತಿಗೆ ನ್ಯಾಯಪೀಠ ಈ ರೀತಿ ಹೇಳಿದೆ. ‘ಸಿಬಿಐ ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ಆತಂಕ ಹುಟ್ಟಿಸುವಂತಿವೆ. ನೀವು ಪ್ರಸ್ತಾಪಿಸಿದ ವಿಷಯಗಳು ಕೂಡ ಕಳವಳಕಾರಿ’ ಎಂದು ವಕೀಲರನ್ನು ಉದ್ದೇಶಿಸಿ ನ್ಯಾಯಪೀಠ ಹೇಳಿತು. ನಂತರ ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಾಜಿ ನಿರ್ದೇಶಕ ಸಂದೀಪ್ ಘೋಷ್‌ ವಿರುದ್ಧ ಕೇಳಿ ಬಂದಿರುವ ಅವ್ಯವಹಾರ ಕುರಿತ ಆರೋಪಗಳಿಗೆ ಸಂಬಂಧಿಸಿದ ತನಿಖೆಯ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆಯೂ ಸಿಬಿಐಗೆ ಸೂಚಿಸಿತು. ‘ಈ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಕಾಲಹರಣ ಮಾಡುತ್ತಿಲ್ಲ. ಸತ್ಯವನ್ನು ಬಯಲಿಗೆಳೆಯಲು ಅದಕ್ಕೆ ಸಾಕಷ್ಟು ಸಮಯಾವಕಾಶ ನೀಡಬೇಕು’ ಎಂದೂ ಹೇಳಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.