ADVERTISEMENT

ಭೂ ಖರೀದಿ ಅಕ್ರಮ ತನಿಖೆಗೆ ಎಸ್ಐಟಿ: ಚಂದ್ರಬಾಬು ನಾಯ್ಡುಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 23:46 IST
Last Updated 22 ಫೆಬ್ರುವರಿ 2020, 23:46 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ಹೈದರಾಬಾದ್‌: ಚಂದ್ರಬಾಬು ನಾಯ್ಡು ಅವಧಿಯಲ್ಲಿ ನಡೆದಿರುವ ಭೂಮಿ ಖರೀದಿ ಹಾಗೂ ಅವ್ಯವಹಾರಗಳ ತನಿಖೆಗೆ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಅವರು ವಿಶೇಷ ತನಿಖಾ ತಂಡ (ಎಸ್‌ಐಟಿ)ರಚಿಸಿರುವುದರಿಂದ ನಾಯ್ಡು ಹಾಗೂ ಅವರ ಪಕ್ಷದ ಮುಖಂಡರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಜನವರಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ರೆಡ್ಡಿ ಅವರು ಮೂರು ರಾಜಧಾನಿಗಳನ್ನು ರಚಿಸುವ ಮಸೂದೆ ಮಂಡಿಸಿದಾಗ, ನಾಯ್ಡು ಅವಧಿಯಲ್ಲಿ ಘೋಷಣೆಯಾಗಿರುವ ಅಮರಾವತಿ ರಾಜಧಾನಿ ರಚನೆಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ಮಾಡಲಾ
ಗುವುದು ಎಂದು ಘೋಷಿಸಿದ್ದರು.

ರಾಜಧಾನಿ ಆಯ್ಕೆ ವಿಷಯದಲ್ಲಿ ನಾಯ್ಡು ದೊಡ್ಡ ತಪ್ಪು ಮಾಡಿದ್ದಾರೆ. ನೂತನ ರಾಜಧಾನಿ ಸುತ್ತಲೂ ಬೇನಾಮಿ ಹೆಸರಿನಲ್ಲಿ ಸಾಕಷ್ಟು ಭೂಮಿಖರೀದಿಸಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದರು.

ADVERTISEMENT

ಮುಖ್ಯಮಂತ್ರಿಯಾದ ತಿಂಗಳಲ್ಲಿಯೇ ಅವ್ಯವಹಾರಗಳ ತನಿಖೆಗಾಗಿ ರೆಡ್ಡಿ ಅವರು ಸಂಪುಟ ಉಪಸಮಿತಿ ರಚನೆ ಮಾಡಿದ್ದರು.

ಹಣಕಾಸು ಸಚಿವ ಬುಗ್ಗಣಾ ರಾಜೇಂದ್ರನಾಥ್‌ ನೇತೃತ್ವದ ಸಮಿತಿಯು,2014ರಲ್ಲಿ ಆಂಧ್ರಪ್ರದೇಶ ರಾಜ್ಯ ರಚನೆಯಾದ ನಂತರ ಸರ್ಕಾರದ ನೀತಿ, ಯೋಜನೆ, ಕಾರ್ಯಕ್ರಮ, ಕಂಪನಿಗಳ ರಚನೆ ಹಾಗೂ ಆಡಳಿತಾತ್ಮಕವಾಗಿ ಕೈಗೊಂಡಿರುವ‌ ನಿರ್ಧಾರಗಳು ಸರ್ಕಾರದ ಮೇಲೆ ಬೀರಿರುವ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಿ ಡಿಸೆಂಬರ್‌ನಲ್ಲಿ ವರದಿ ನೀಡಿತ್ತು.

ಸರ್ಕಾರದ ಕಾರ್ಯವಿಧಾನ, ಕಾನೂನು, ಹಣಕಾಸು ವ್ಯವಹಾರಗಳಲ್ಲಿ ಅವ್ಯವಹಾರ ನಡೆದಿರುವುದನ್ನು ಸಮಿತಿ ಪತ್ತೆ ಹಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.