ನವದೆಹಲಿ: ‘ಉದ್ಯೋಗಕ್ಕಾಗಿ ಭೂಮಿ ಹಗರಣ’ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಬೇಕೆಂದು ಕೋರಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶನಿವಾರ ವಜಾಗೊಳಿಸಿದೆ.
ಲಾಲೂ ಪ್ರಸಾದ್ ಅವರು ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ವಾದಗಳನ್ನು ಮಂಡಿಸಲು ಸ್ವತಂತ್ರರು ಎಂದಿರುವ ನ್ಯಾಯಮೂರ್ತಿ ರವೀಂದರ್ ದುಡೇಜಾ, ಈ ಹಂತದಲ್ಲಿ ವಿಚಾರಣೆಗೆ ತಡೆ ನೀಡಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದಿದ್ದಾರೆ.
ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದೆ. ಮೂವರು ನ್ಯಾಯಾಧೀಶರ ಪೀಠವು ವಿಚಾರಣೆ ನಡೆಸುವ ನಿರೀಕ್ಷೆಯಿದೆ ಎಂದು ಸಿಬಿಐ ತಿಳಿಸಿದೆ.
ಏನಿದು ಪ್ರಕರಣ?
ಮುಂಬೈ, ಜಬಲ್‌ಪುರ, ಕೋಲ್ಕತ್ತಾ, ಜೈಪುರ ಹಾಗೂ ಹಾಜಿಪುರದ ವಿವಿಧ ರೈಲ್ವೆ ವಲಯಗಳಲ್ಲಿ ಬಿಹಾರದವರನ್ನು ಗ್ರೂಪ್ ಡಿ ಹುದ್ದೆಯ ಸಮಾನಾಂತರ ಹುದ್ದೆಗಳಿಗೆ 2004–2009 ಅವಧಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ ನೇಮಕ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಲಾಲೂ ಪ್ರಸಾದ್ ಅವರ ಕುಟುಂಬ ಸದಸ್ಯರ ಹಾಗೂ ‘ಎಕೆ ಇನ್ಫೊಸಿಸ್ಟಮ್ ಪ್ರೈವೆಟ್ ಲಿಮಿಟೆಡ್’ ಎನ್ನುವ ಕಂಪೆನಿ ಹೆಸರಿಗೆ ಉದ್ಯೋಗ ಪಡೆದುಕೊಂಡವರು ಅಥವಾ ಅವರ ಕುಟುಂಬದವರು ತಮ್ಮ ಭೂಮಿ ವರ್ಗಾಯಿಸಿದ್ದರು. ನಂತರ ಈ ಕಂಪೆನಿಯನ್ನು ಲಾಲೂ ಕುಟುಂಬದವರೊಬ್ಬರು ಖರೀದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.