ADVERTISEMENT

ನೇರ ನೇಮಕಾತಿ ಯೋಜನೆಗೆ ಅತ್ಯುತ್ಸಾಹದ ಪ್ರತಿಕ್ರಿಯೆ: 10 ಹುದ್ದೆಗೆ 6,000 ಅರ್ಜಿ

ಪಿಟಿಐ
Published 19 ಆಗಸ್ಟ್ 2018, 16:14 IST
Last Updated 19 ಆಗಸ್ಟ್ 2018, 16:14 IST
   

ನವದೆಹಲಿ: ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರಿಗೆ ಸರ್ಕಾರದ ಉನ್ನತ ಹುದ್ದೆ ನೀಡುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಂಟಿ ಕಾರ್ಯದರ್ಶಿ ದರ್ಜೆಯ 10 ಹುದ್ದೆಗಳಿಗೆ ಖಾಸಗಿ ಕ್ಷೇತ್ರದಿಂದ ಜನರನ್ನು ಸೇರಿಸಿಕೊಳ್ಳಲು ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಈ ಹತ್ತು ಹುದ್ದೆಗಳಿಗೆ ಆರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

ರೆವೆನ್ಯೂ, ಆರ್ಥಿಕ ಸೇವೆಗಳು, ಆರ್ಥಿಕ ವ್ಯವಹಾರಗಳು, ಕೃಷಿ ಮತ್ತು ರೈತರ ಕಲ್ಯಾಣ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಜಲಸಾರಿಗೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನ, ನಾಗರಿಕ ವಿಮಾನ ಯಾನ ಮತ್ತು ವಾಣಿಜ್ಯ ಇಲಾಖೆಗಳಿಗೆ ಈ ಪರಿಣತರನ್ನು ನೇಮಿಸಲು ಉದ್ದೇಶಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನವಾಗಿತ್ತು.

ಅರ್ಜಿಗಳ ಪರಿಶೀಲನೆಯ ಕಾರ್ಯ ಆರಂಭವಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಜಂಟಿ ಕಾರ್ಯದರ್ಶಿ ಶ್ರೇಣಿಯ ಹುದ್ದೆಗೆ ಸಾಮಾನ್ಯವಾಗಿ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಮೂಲಕ ಆಯ್ಕೆಯಾಗುವ ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಐಆರ್‌ಎಸ್‌ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ದೇಶದಾದ್ಯಂತ ಭಾರತೀಯ ಆಡಳಿತ ಸೇವೆಯ (ಐಎಎಸ್‌) 6,500 ಹುದ್ದೆಗಳಿವೆ. ಸದ್ಯ 5,004 ಐಎಎಸ್‌ ಅಧಿಕಾರಿಗಳು ಮಾತ್ರ ಇದ್ದಾರೆ.

ಖಾಸಗಿ ಕ್ಷೇತ್ರದಿಂದ ಉನ್ನತ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವುದು ನಾಗರಿಕ ಸೇವೆಯ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕಸಿಯುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಈ ಆರೋಪಗಳನ್ನು ಸರ್ಕಾರ ಅಲ್ಲಗಳೆದಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೂ ಒಬ್ಬ ಅಧಿಕಾರಿಯಾಗಿದ್ದರು. ಹಾಗೆಯೇ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ ಅವರನ್ನು ನೇರ ನೇಮಕಾತಿ ಮೂಲಕವೇ ನೇಮಿಸಿಕೊಳ್ಳಲಾಗಿತ್ತು ಎಂದು ಸರ್ಕಾರ ಹೇಳಿತ್ತು.

ಕೊರತೆಗೆ ಕಾರಣ

1995ರಿಂದ 2002ರ ಅವಧಿಯಲ್ಲಿ ಲೋಕಸೇವಾ ಆಯೋಗದ ಮೂಲಕ ನಡೆಸಿದ ನೇಮಕಾತಿಯ ಸಂಖ್ಯೆಯಲ್ಲಿ ಕುಸಿತವಾಗಿತ್ತು. ಹಾಗಾಗಿ ಜಂಟಿ ಕಾರ್ಯದರ್ಶಿ, ನಿರ್ದೇಶಕ, ಉಪ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳ ಕೊರತೆ ಇದೆ ಎಂದು ಕಾರ್ಯದರ್ಶಿಗಳ ಗುಂಪು ಸಮೀಕ್ಷೆ ನಡೆಸಿ 2017ರಲ್ಲಿ ಸರ್ಕಾರಕ್ಕೆ ವರದಿ ಕೊಟ್ಟಿತ್ತು.

ಈ ವರದಿಯ ಆಧಾರದಲ್ಲಿಯೇ ಖಾಸಗಿ ಕ್ಷೇತ್ರದಿಂದ ನೇರ ನೇಮಕಾತಿಗೆ ಸರ್ಕಾರ ನಿರ್ಧರಿಸಿದೆ. ಮಾನವ ಸಂಪನ್ಮೂಲದ ಲಭ್ಯತೆ ಹೆಚ್ಚಿಸುವುದರ ಜತೆಗೆ ಖಾಸಗಿ ಕ್ಷೇತ್ರದ ಪ್ರತಿಭಾವಂತರನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.