ಪ್ರಾತಿನಿಧಿಕ ಚಿತ್ರ
ಸಿಂಗಪುರ: ಸಿಂಗಪುರದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವುದು ಅಪರಾಧ. ಸಡಗರದಿಂದ ಬೆಳಕಿನ ಹಬ್ಬವಾದ ದೀಪಾವಳಿ ಆಚರಿಸಿ ತ್ಯಾಜ್ಯ ಸುರಿದ ಭಾರತೀಯರು ಈಗ ಸಂಕಷ್ಟ ಅನುಭವಿಸುವಂತಾಗಿದೆ.
ಬಹು ಜನಾಂಗೀಯ ನೆಲೆಯಾದ ಸಿಂಗಪುರದ ಮೌಂಟ್ ಬ್ಯಾಟನ್ ಪ್ರದೇಶದಲ್ಲಿ ನೆಲೆಸಿರುವ ಭಾರತೀಯರು ಭಾನುವಾರ ಹಬ್ಬ ಆಚರಿಸಿದ್ದರು. ಬಳಿಕ ಕಸ ವಿಲೇವಾರಿ ಮಾಡಿಲ್ಲ. ಹಾಗಾಗಿ, ಈ ಪ್ರದೇಶದ ನಿವಾಸಿಗಳ ಸಂಘವು, ತ್ವರಿತವಾಗಿ ಕಸ ವಿಲೇವಾರಿ ಮಾಡುವಂತೆ ಬ್ಯಾನರ್ ಅಳವಡಿಸಿದೆ. ಈ ವಿವಾದ ಬಗೆಹರಿಸಲು ಮೌಂಟ್‌ಬ್ಯಾಟನ್ ಕ್ಷೇತ್ರದ ಸಂಸದ ಲಿಮ್ ಬಯೋ ಚುವಾನ್ ಮಧ್ಯಪ್ರವೇಶಿಸಿದ್ದಾರೆ.
‘ರಾಷ್ಟ್ರೀಯ ಪರಿಸರ ಏಜೆನ್ಸಿಯ (ಎನ್‌ಇಎ) ಬೆಂಬಲದೊಂದಿಗೆ ನಿವಾಸಿಗಳ ಸಂಘವು ಈ ಬ್ಯಾನರ್ ಅಳವಡಿಸಿದೆ. ತಪ್ಪು ತಿಳಿವಳಿಕೆ ಮೂಡದಂತೆ ಈ ಕ್ರಮವಹಿಸಲಾಗಿದೆ. ದೀಪಾವಳಿ ಆಚರಣೆ ನಂತರ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವುದಿಲ್ಲ ಎಂಬ ದೂರುಗಳ ಅನ್ವಯ ಈ ಕ್ರಮಕ್ಕೆ ಮುಂದಾಗಿದೆ’ ಎಂದು ಸಂಸದ ಚುವಾನ್ ಹೇಳಿದ್ದಾರೆ.
‘ನನ್ನ ಕ್ಷೇತ್ರದ ಹಲವೆಡೆ ಹಬ್ಬಕ್ಕೆ ಶುಭಾಶಯ ಕೋರುವ ಬ್ಯಾನರ್ ಅಳವಡಿಸಲಾಗಿದೆ. ಕಸ ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಒಂದು ಪ್ರದೇಶದಲ್ಲಷ್ಟೇ ಬ್ಯಾನರ್ ಅಳವಡಿಸಲಾಗಿದೆ. ಇದರ ಹಿಂದೆ ಯಾವುದೇ ಒಂದು ಜನಾಂಗವನ್ನು ಗುರಿಯಾಗಿಟ್ಟುಕೊಂಡಿಲ್ಲ’ ಎಂದು ಹೇಳಿದ್ದಾರೆ.
‘ನಿವಾಸಿಗಳ ಸಂಘದ ಸದಸ್ಯರು ಚರ್ಚಿಸಿದ ಬಳಿಕ ಎಲ್ಲೆಂದರಲ್ಲಿ ಕಸ ಸುರಿಯದಂತೆ ನೆನಪಿಸಲು ಈ ಬ್ಯಾನರ್ ಅಳವಡಿಸಿದ್ದಾರೆ’ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.