ADVERTISEMENT

ಅಂಗಿ ಗುಂಡಿ ಹಾಕದೆ ಕೋರ್ಟ್‌ಗೆ ಬಂದ ವಕೀಲ: 6 ತಿಂಗಳು ಜೈಲು

ಪಿಟಿಐ
Published 11 ಏಪ್ರಿಲ್ 2025, 13:37 IST
Last Updated 11 ಏಪ್ರಿಲ್ 2025, 13:37 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಲಖನೌ: ನ್ಯಾಯಾಲಯಕ್ಕೆ ಬರುವಾಗ ವಕೀಲರ ಉಡುಪು ಧರಿಸದೇ, ಅಂಗಿಯ ಗುಂಡಿ ಹಾಕದೇ ಬಂದ ಕಾರಣಕ್ಕೆ ಅಲಹಾಬಾದ್‌ ಹೈಕೋರ್ಟ್‌ ವಕೀಲರೊಬ್ಬರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. 

2021ರ ಆ. 18ರಂದು ನ್ಯಾಯಾಲಯಕ್ಕೆ ಸಮರ್ಪಕ ಉಡುಪು ಧರಿಸದೇ ಬಂದ ಪಾಂಡೆ, ನ್ಯಾಯಾಲಯದ ಸಭಾಂಗಣದಲ್ಲಿ ಅಸಭ್ಯವಾಗಿ ವರ್ತಿಸಿದ್ದರು. ನ್ಯಾಯಾಧೀಶರನ್ನು ‘ಗೂಂಡಾಗಳು’ ಎಂದಿದ್ದರು. ಇವರ ವರ್ತನೆಯನ್ನು ಇತರರು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ನ್ಯಾಯಾಲಯದಿಂದ ಹೊರಹೋಗುವಂತೆಯೂ ಸೂಚಿಸಿದ್ದರು. ಈ ಇಡೀ ಪ್ರಕರಣ ಕುರಿತು ನ್ಯಾಯಾಲಯವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.

ADVERTISEMENT

ಪಾಂಡೆಗೆ ಹಲವು ಅವಕಾಶಗಳನ್ನು ನ್ಯಾಯಾಲಯ ನೀಡಿದ್ದರೂ, ಒಮ್ಮೆಯೂ ಅವರು ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಇದೇ ವೇಳೆ 2017ರಲ್ಲಿ ಹೈಕೋರ್ಟ್‌ನಿಂದ ಎರಡು ವರ್ಷ ನಿಷೇಧಕ್ಕೊಳಗಾದ ಪ್ರಕರಣವನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.

‘ಇತರರಿಗೆ ಪಾಠವಾಗುವಂತಹ ಶಿಕ್ಷೆ ನೀಡಲಾಗಿದೆ’ ಎಂದು ನ್ಯಾಯಮೂರ್ತಿಗಳಾದ ವಿವೇಕ್‌ ಚೌಧರಿ ಮತ್ತು ಬಿ.ಆರ್‌. ಸಿಂಗ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ಪಾಂಡೆಗೆ ₹2 ಸಾವಿರ ದಂಡವನ್ನೂ ವಿಧಿಸಿರುವ ನ್ಯಾಯಪೀಠ, ದಂಡ ಪಾವತಿಸಲು ವಿಫಲವಾದರೆ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಆದೇಶಿಸಿದೆ.

ಇದಲ್ಲದೆ, ಅಲಹಾಬಾದ್ ಹೈಕೋರ್ಟ್ ಮತ್ತು ಅದರ ಲಖನೌ ಪೀಠದಲ್ಲಿ ವಕೀಲಿ ವೃತ್ತಿಯಿಂದ ನಿಮ್ಮನ್ನು (ಪಾಂಡೆ) ಏಕೆ ನಿರ್ಬಂಧಿಸಬಾರದು ಎಂದು ಪ್ರಶ್ನಿಸಿ, ಪಾಂಡೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಪೀಠ, ಮೇ 1ರವರೆಗೆ ಪ್ರತಿಕ್ರಿಯಿಸಲು ಅವಕಾಶ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.