ADVERTISEMENT

ನಾಯಕತ್ವ ಗೊಂದಲದಿಂದ ಕಾಂಗ್ರೆಸ್‌ಗೆ ಧಕ್ಕೆ: ತರೂರ್‌

ಪಿಟಿಐ
Published 29 ಜುಲೈ 2019, 1:07 IST
Last Updated 29 ಜುಲೈ 2019, 1:07 IST
ತರೂರ್‌
ತರೂರ್‌   

ನವದೆಹಲಿ: ರಾಹುಲ್‌ ಗಾಂಧಿ ಅವರ ರಾಜೀನಾಮೆಯ ಬಳಿಕ ನಾಯಕತ್ವದ ವಿಚಾರದಲ್ಲಿ ಇರುವ ‘ಸ್ಪಷ್ಟತೆಯ ಕೊರತೆ’ಯು ಕಾಂಗ್ರೆಸ್‌ ಪಕ್ಷಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಆ ಪಕ್ಷದ ಸಂಸದ ಶಶಿ ತರೂರ್‌ ಹೇಳಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯತ್ವವೂ ಸೇರಿ ಎಲ್ಲ ಹುದ್ದೆಗಳನ್ನು ತೆರವು ಮಾಡಿ ಚುನಾವಣೆ ಮೂಲಕ ಈ ಸ್ಥಾನಗಳನ್ನು ಭರ್ತಿ ಮಾಡುವುದೇ ಇದಕ್ಕೆ ಇರುವ ಪರಿಹಾರ. ಚುನಾವಣೆ ಮೂಲಕ ಆಯ್ಕೆಯಾದರೆ ನಾಯಕರಿಗೆ ಅಧಿಕೃತ ಮುದ್ರೆ ಸಿಕ್ಕಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷವನ್ನು ಮುನ್ನಡೆಸಲು ಯುವ ನಾಯಕರು ಉತ್ತಮ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರ ಹೇಳಿಕೆಯನ್ನು ತರೂರ್‌ ಬೆಂಬಲಿ
ಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದರೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಸ್ಪರ್ಧಿಸುವ ಸಾಧ್ಯತೆ ಇದೆ. ಆದರೆ, ಅವರು ಕಣಕ್ಕೆ ಇಳಿಯಬೇಕೇ ಎಂಬುದನ್ನು ಗಾಂಧಿ ಕುಟುಂಬ ನಿರ್ಧರಿಸಲಿದೆ ಎಂದು ತರೂರ್‌ ಹೇಳಿದ್ದಾರೆ.

ಪಕ್ಷದ ಸದ್ಯದ ಸ್ಥಿತಿಯ ಬಗ್ಗೆ ತರೂರ್‌ ಅವರು ಅಸಮಾಧಾನ ವ್ಯಕ್ತಪಡಿಸಿ
ದ್ದಾರೆ. ‘ಕಾಂಗ್ರೆಸ್‌ನಲ್ಲಿ ಇರುವವರು ಈಗ ಎದುರಿಸುತ್ತಿರುವ ಸ್ಥಿತಿಗೆ ಪರಿಹಾರ ಏನು ಎಂಬ ಬಗ್ಗೆ ಸ್ಪಷ್ಟತೆಯೇ ಇಲ್ಲ’ ಎಂದು ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ADVERTISEMENT

‘ಕೇಂದ್ರ ನಾಯಕತ್ವದ ಬಗೆಗಿನ ಅಸ್ಪಷ್ಟತೆ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವವರು ಯಾರು, ಸ್ಫೂರ್ತಿ ಮತ್ತು ಚೈತನ್ಯ ಯಾರು ತುಂಬಬೇಕು, ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವವರು ಯಾರು ಎಂಬುದೇ ತಿಳಿಯುತ್ತಿಲ್ಲ’ ಎಂದಿದ್ದಾರೆ.

ಪ್ರಿಯಾಂಕಾ ವರ್ಚಸ್ಸು

ಪ್ರಿಯಾಂಕಾ ಗಾಂಧಿ ಅವರಿಗೆ ‘ಸಹಜ ವರ್ಚಸ್ಸು’ ಇದೆ. ಜತೆಗೆ ಸಂಘಟನಾತ್ಮಕ ಅನುಭವವೂ ಇದೆ. ಕಳೆದ ಚುನಾವಣೆಯಲ್ಲಿ ಅವರು ಉತ್ತರ ಪ್ರದೇಶದಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಅವರು ಅಧ್ಯಕ್ಷರಾದರೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಸಾಧ್ಯ ಎಂದು ತರೂರ್‌ ಪ್ರತಿಪಾದಿಸಿದ್ದಾರೆ.

ಆದರೆ, ‘ತಾವು ರಾಜೀನಾಮೆ ನೀಡಿದ ಸ್ಥಾನಕ್ಕೆ ಗಾಂಧಿ ಕುಟುಂಬದ ಯಾರೂ ಬರುವಂತಿಲ್ಲ ಎಂದು ರಾಹುಲ್‌ ಹೇಳಿದ್ದಾರೆ. ಪ್ರಿಯಾಂಕಾ ಸ್ಪರ್ಧಿಸಲು ಇದು ಅಡ್ಡಿಯಾಗಬಹುದು’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.