ನವದೆಹಲಿ: ಛತ್ತೀಸಗಢ ಪೊಲೀಸರು ಸಿಪಿಐ (ಮಾವೋವಾದಿ) ಪ್ರಧಾನ ಕಾರ್ಯದರ್ಶಿ ನಂಬಾಲಾ ಕೇಶವ್ ರಾವ್ ಮತ್ತು ಇತರ 26 ಮಂದಿಯನ್ನು ಹತ್ಯೆಗೈದಿದ್ದಕ್ಕೆ ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ನಕ್ಸಲರು ಪದೇ ಪದೇ ಮಾತುಕತೆಗೆ ಆಹ್ವಾನಿಸುತ್ತಿದ್ದರೂ ಸರ್ಕಾರ ಅದನ್ನು ಕಡೆಗಣಿಸಿ ‘ನ್ಯಾಯಾಂಗದ ವ್ಯಾಪ್ತಿಗೆ ತಾರದೆ ಹತ್ಯೆ ಮಾಡುವ ಅಭಿಯಾನ’ವನ್ನು ಆರಂಭಿಸಿದೆ’ ಎಂದು ಎಡಪಕ್ಷಗಳು ಕಿಡಿಕಾರಿವೆ.
‘ಈ ಹತ್ಯೆಯನ್ನು ಪಕ್ಷವು ಖಂಡಿಸುತ್ತದೆ’ ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಕ್ಸಲ್ ಸಮಸ್ಯೆ ಅಂತ್ಯಕ್ಕೆ 2026ರ ಮಾರ್ಚ್ 31 ಕೊನೆಯ ದಿನ ಎಂದು ಗಡುವು ನಿಗದಿ ಮಾಡಿದ್ದು ಮತ್ತು ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ‘ನಕ್ಸಲರೊಂದಿಗೆ ಮಾತುಕತೆಯ ಅಗತ್ಯವಿಲ್ಲ’ ಎಂದಿರುವುದು ಅವರ ‘ಫ್ಯಾಸಿಸ್ಟ್ ಮನಸ್ಥಿತಿ’ಯನ್ನು ಬಿಂಬಿಸುತ್ತದೆ. ಈ ನಡೆಯು ಮನುಷ್ಯರ ಹತ್ಯೆಯನ್ನು ಸಂಭ್ರಮಿಸುವಂತಿದೆ. ಇಂಥ ಹೇಳಿಕೆಗಳು ಪ್ರಜಾಪ್ರಭುತ್ವ ವಿರೋಧಿ’ ಎಂದು ಅದು ಹರಿಹಾಯ್ದಿದೆ.
‘ನಕ್ಸಲರ ಪುನರಾವರ್ತಿತ ಮನವಿಯನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಛತ್ತೀಸಗಢ ರಾಜ್ಯ ಸರ್ಕಾರವು, ಮಾತುಕತೆ ಮೂಲಕ ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳುವ ಆಯ್ಕೆಯನ್ನು ತಳ್ಳಿಹಾಕಿವೆ. ಬದಲಾಗಿ ಹತ್ಯೆಗೈಯುವ ಅಮಾನವೀಯ ಹಾದಿಯನ್ನು ಅನುಸರಿಸುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಿಪಿಐ ನ್ಯಾಷನಲ್ ಸೆಕ್ರೆಟರಿಯೇಟ್, ‘ನಕ್ಸಲ್ ವಿರೋಧಿ ಕಾರ್ಯಾಚರಣೆ ಸೋಗಿನಲ್ಲಿ ‘ನ್ಯಾಯಾಂಗದ ವ್ಯಾಪ್ತಿಗೆ ತಾರದೆ ಹತ್ಯೆ ಮಾಡುವ ಅಭಿಯಾನ’ ಆರಂಭಿಸಿರುವುಕ್ಕೆ ಇದು ಮತ್ತೊಂದು ನಿದರ್ಶನ. ನಕ್ಸಲ್ ನಾಯಕನ ಇರುವಿಕೆ ಬಗ್ಗೆ ಅಧಿಕಾರಿಗಳಿಗೆ ನಿಖರ ಗುಪ್ತಚರ ಮಾಹಿತಿ ಲಭ್ಯವಾಗಿದ್ದರೆ ಏಕೆ ಅವರನ್ನು ಕಾನೂನಾತ್ಮಕವಾಗಿ ಬಂಧಿಸಲಿಲ್ಲ. ಸಂವಿಧಾನಾತ್ಮಕ ಪ್ರಕ್ರಿಯೆಯನ್ನು ನಿರ್ಲಕ್ಷಿಸಿದ್ದು ಏಕೆ’ ಎಂದು ಪ್ರಶ್ನಿಸಿದೆ.
ಪ್ರಜಾಸತ್ತಾತ್ಮಕ ಸಮಾಜವು ರಾಜ್ಯವು ನ್ಯಾಯಾಧೀಶನಾಗಲು, ನಿರ್ಣಾಯಕನಾಗಲು ಮತ್ತು ಗಲ್ಲಿಗೇರಿಸುವ ವ್ಯಕ್ತಿಯಾಗಲು ಅವಕಾಶ ನೀಡುವುದಿಲ್ಲ. ಎಲ್ಲರಿಗೂ ನ್ಯಾಯ ಒದಗಿಸಬೇಕು. ಆದಿವಾಸಿಗಳ ಘನತೆ ಮತ್ತು ಹಕ್ಕುಗಳನ್ನು ಎತ್ತಿಹಿಡಿಯಬೇಕು ಎಂದು ಅದು ಹೇಳಿದೆ.
ಛತ್ತೀಸಗಢ ಪೊಲೀಸರು ನಡೆಸಿದ ಎನ್‌ಕೌಂಟರ್ ವಿಚಾರವು ನ್ಯಾಯಾಂಗ ತನಿಖೆಗೆ ಒಳಪಡಬೇಕು ಎಂದು ಅದು ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.