ADVERTISEMENT

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಪೊನ್ನಮ್ಮಾಳ್ ನಿಧನ

ಪಿಟಿಐ
Published 22 ಜೂನ್ 2021, 18:31 IST
Last Updated 22 ಜೂನ್ 2021, 18:31 IST
 ಪರ್‌ಸ್ಸಾಲ ಬಿ. ಪೊನ್ನಮ್ಮಾಳ್
 ಪರ್‌ಸ್ಸಾಲ ಬಿ. ಪೊನ್ನಮ್ಮಾಳ್   

ತಿರುವನಂತಪುರ: ಖ್ಯಾತ ಕರ್ನಾಟಕ ಸಂಗೀತಗಾರ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಪರಸ್ಸಲ ಬಿ. ಪೊನ್ನಮ್ಮಾಳ್ (96) ಅವರು ಮಂಗಳವಾರ ಇಲ್ಲಿನ ವಾಲಿಯಾಸಾಲಾದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಎಂಟು ದಶಕಗಳಿಂದ ಶಾಸ್ತ್ರೀಯ ಸಂಗೀತ ಪ್ರಿಯರನ್ನು ತಮ್ಮ ಸಂಗೀತ ಕಛೇರಿಗಳ ಮೂಲಕ ಸೆಳೆದಿದ್ದ ಪೊನ್ನಮ್ಮಾಳ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರಿಗೆ ಇಬ್ಬರು ಪುತ್ರರಿದ್ದಾರೆ. ಪತಿ ದೇವನಾಯಕಂ ಅಯ್ಯರ್ ಮತ್ತು ಒಬ್ಬ ಮಗ ಮತ್ತು ಮಗಳು ಈ ಹಿಂದೆಯೇ ಮೃತಪಟ್ಟಿದ್ದಾರೆ.

1940ರಲ್ಲಿ ಸ್ವಾತಿ ತಿರುನಾಳ್ ಸಂಗೀತ ಕಾಲೇಜಿಗೆ ದಾಖಲಾದ ಪ್ರಥಮ ಮಹಿಳೆಯಾಗಿ ಪೊನ್ನಮ್ಮಾಳ್ ಅವರು, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿನ ಏಕರೂಪಿ ಲಿಂಗ ಮಾದರಿಯನ್ನು (ಸ್ಟಿರಿಯೊಟೈಪ್) ಮುರಿದಿದ್ದರು. ನಂತರ ಅದೇ ಕಾಲೇಜಿಗೆ ಮೊದಲ ಮಹಿಳಾ ಅಧ್ಯಾ‍ಪಕಿಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ತ್ರಿಪುನಿಥುರಾದ ಆರ್‌ಎಲ್‌ವಿ ಕಾಲೇಜ್ ಆಫ್ ಮ್ಯೂಸಿಕ್‌ ಅಂಡ್ ಫೈನ್ಸ್ ಆರ್ಟ್ಸ್‌ಗೆ ಮೊದಲ ಮಹಿಳಾ ಪ್ರಾಂಶುಪಾಲೆಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ADVERTISEMENT

ಪುರುಷ ಪ್ರಾಬಲ್ಯದ, ಶತಮಾನಗಳಷ್ಟು ಹಳೆಯದಾದ ಸಂಪ್ರದಾಯವನ್ನು ಮುರಿದು, 2006ರಲ್ಲಿ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಆಚರಣೆಯಲ್ಲಿ ನವರಾತ್ರಿ ಮಂಟಪದಲ್ಲಿ ಹಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.

2017ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಅವರಿಗೆ ಹಲವು ಪ್ರಶಸ್ತಿ–ಪುರಸ್ಕಾರಗಳು ಸಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.