ADVERTISEMENT

ತಲೆಗೆ ವಾಟರ್ ಕ್ಯಾನ್ ಸಿಕ್ಕಿಸಿಕೊಂಡು ಪಡಿಪಾಟಲು ಪಟ್ಟ ಚಿರತೆ: ಮುಂದೆ ಆಗಿದ್ದೇನು?

ಪಿಟಿಐ
Published 16 ಫೆಬ್ರುವರಿ 2022, 10:05 IST
Last Updated 16 ಫೆಬ್ರುವರಿ 2022, 10:05 IST
ನೀರಿನ ಕ್ಯಾನ್‌ ಒಂದರಲ್ಲಿ ತಲೆ ಸಿಕ್ಕಿಸಿಕೊಂಡು ತೊಂದರೆ ಅನುಭವಿಸಿದ ಚಿರತೆ
ನೀರಿನ ಕ್ಯಾನ್‌ ಒಂದರಲ್ಲಿ ತಲೆ ಸಿಕ್ಕಿಸಿಕೊಂಡು ತೊಂದರೆ ಅನುಭವಿಸಿದ ಚಿರತೆ   

ಥಾಣೆ: ಬೇಜವಾಬ್ದಾರಿಯುತವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದರ ಪರಿಣಾಮ ಏನೆಲ್ಲ ಆಗಬಹುದು ಎಂಬುದಕ್ಕೆ ತಾಜಾ ಉದಾಹರಣೆ ಸಿಕ್ಕಿದೆ.

ಸುಮಾರು ಒಂದು ವರ್ಷ ವಯಸ್ಸಿನ ಚಿರತೆಯೊಂದು ಕಾಡಿನಲ್ಲಿ ಬಿಸಾಕಿದ್ದ ನೀರಿನ ಕ್ಯಾನ್‌ ಒಂದರಲ್ಲಿ ತಲೆ ಸಿಕ್ಕಿಸಿಕೊಂಡು ಎರಡು ದಿನ ದಿಕ್ಕೆಟ್ಟು, ಕಂಗಾಲಾಗಿ ಓಡಾಡಿ, ಕಡೆಗೂ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ ಬಳಿಯ ಗೋರೆಗಾಂವ್ ಎಂಬಲ್ಲಿ ಈ ಘಟನೆ ನಡೆದಿದೆ.

ADVERTISEMENT

ಕಳೆದ ಎರಡು ದಿನದ ಹಿಂದೆ ಆಕಸ್ಮಿಕವಾಗಿ ಚಿರತೆ ಕಾಡಿನಲ್ಲಿ ಯಾರೋ ಬಿಸಾಡಿದ್ದ ನೀರಿನ ಕ್ಯಾನ್ ಒಳಗೆ ತಲೆ ಸಿಕ್ಕಿಸಿಕೊಂಡು ಅದರಿಂದ ಹೊರ ಬರದೇ ಕಂಗಾಲಾಗಿ ಓಡಾಡಿದೆ. ಈ ಸಂದರ್ಭದಲ್ಲಿ ಕಾಡಿನ ರಸ್ತೆಯಲ್ಲಿ ಪ್ರಯಾಣಿಕರೊಬ್ಬರ ಕಣ್ಣಿಗೆ ಬಿದ್ದಿದೆ. ಆಗ ಅವರು ಚಿರತೆಯ ಪಡಿಪಾಟಲನ್ನು ನೋಡಿ ವಿಡಿಯೊ ಮಾಡಿಕೊಂಡು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ.

ವಿಡಿಯೊ ವೈರಲ್ ಆದ ಬಳಿಕ ಚಿರತೆಯ ರಕ್ಷಣಗೆ ಥಾಣೆ ಜಿಲ್ಲೆಯ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡು ಕಡೆಗೂ ನೀರಿನ ಕ್ಯಾನ್ ಸಿಕ್ಕಿಸಿಕೊಂಡಿದ್ದ ಚಿರತೆಯನ್ನು ಬದ್ಲಾಪುರ್ ಬಳಿ ಪತ್ತೆ ಹಚ್ಚಿದ್ದಾರೆ.

ಎರಡು ದಿನಗಳಿಂದ ಚಿರತೆ ತೊಂದರೆ ಅನುಭವಿಸಿದೆ. ಈ ಸಂದರ್ಭದಲ್ಲಿ ಅದಕ್ಕೆ ಆಹಾರವಿಲ್ಲದೇ ತೀವ್ರ ನಿತ್ರಾಣಗೊಂಡಿದೆ. ಪ್ಲಾಸ್ಟಿಕ್ ಕ್ಯಾನ್‌ ಅನ್ನು ಕತ್ತರಿಸಿ ತೆಗೆಯಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಿ ಚೇತರಿಸಿಕೊಂಡ ಬಳಿಕ ಚಿರತೆಯನ್ನು ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್‌ಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕಾಡು ಹಾಗೂ ಕಾಡಂಚಿನಲ್ಲಿ ವಾಸಿಸುವ ಜನ ಹಾಗೂ ಪ್ರವಾಸಕ್ಕೆ ತೆರಳುವ ಜನ ಇನ್ನಾದರೂ ಪ್ಲಾಸ್ಟಿಕ್ ಸಾಮಾನುಗಳನ್ನು ಎಸೆಯುವುದನ್ನು ನಿಲ್ಲಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ತೊಂದರೆ ಅನುಭವಿಸಿದ ವಿಡಿಯೊ ಹಂಚಿಕೊಂಡು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.