ADVERTISEMENT

ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ನಿಗಾ; ಸರ್ಕಾರದ ಜವಾಬ್ದಾರಿ: ಜೆ.ಪಿ. ನಡ್ಡಾ

ಪಿಟಿಐ
Published 27 ನವೆಂಬರ್ 2022, 13:45 IST
Last Updated 27 ನವೆಂಬರ್ 2022, 13:45 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಅಹಮದಾಬಾದ್‌/ವಡೋದರಾ: ಗುಜರಾತ್‌ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ, ‘ನಮ್ಮ ದೇಹದಲ್ಲಿನ ಕೆಟ್ಟ ಕೋಶಗಳ ಮೇಲೆ ಪ್ರತಿಕಾಯಗಳು ನಿಗಾ ವಹಿಸುವಂತೆ, ರಾಷ್ಟ್ರ ವಿರೋಧಿ ಶಕ್ತಿಗಳ ಮೇಲೆ ನಿಗಾ ವಹಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾನುವಾರ ತಿಳಿಸಿದರು.

‘ದೇಶ ಹಾಗೂ ಸಮಾಜದ ವಿರುದ್ಧ ಕೆಲಸ ಮಾಡುತ್ತಿರುವವರ ಮೇಲೆ ನಿಗಾವಹಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ’ ಎಂದು ಹೇಳಿದಅವರು, ‘ಕೆಲವು ಶಕ್ತಿಗಳು ಭೂಗತವಾಗಿ ಕೆಲಸ ನಿರ್ವಹಿಸುತ್ತಿರುತ್ತವೆ. ಆದ್ದರಿಂದ ಇಂಥವುಗಳ ಮೇಲೆ ನಿಗಾವಹಿಸಬೇಕು’ ಎಂದರು.

ಹಿಮಾಚಲ ಪ್ರದೇಶ, ಗುಜರಾತ್‌ ಸೇರಿದಂತೆ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಭರವಸೆ ನೀಡಿದ್ದ ಏಕರೂಪ ನಾಗರಿಕ ಸಂಹಿತೆ ಕುರಿತಾಗಿ ಮಾತನಾಡಿದ ನಡ್ಡಾ, ‘ಇದು ರಾಷ್ಟ್ರೀಯ ಸಮಸ್ಯೆ ಎಂದು ಪಕ್ಷ ಮನಗಂಡಿದೆ’ ಎಂದು ತಿಳಿಸಿದರು.

ADVERTISEMENT

‘ರಾಷ್ಟ್ರದ ಸಂಪನ್ಮೂಲ ಹಾಗೂ ಜವಾಬ್ದಾರಿಗಳು ಪ್ರತಿಯೊಬ್ಬರಿಗೂ ಸಮಾನವೇ. ಈ ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆ ಮೊದಲ ಹಂತವಾಗಿದೆ. ಸಾಧ್ಯವಾದಷ್ಟು ರಾಜ್ಯಗಳಲ್ಲೆಲ್ಲ ಈ ಸಂಹಿತೆಯನ್ನು ಜಾರಿಗೊಳಿಸಲಾಗುವುದು’ ಎಂದು ಹೇಳಿದರು.

ಶನಿವಾರ ಈ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ನಡ್ಡಾ ಅವರು, ‘ಸಂಭಾವ್ಯ ಬೆದರಿಕೆಗಳು, ಉಗ್ರ ಸಂಘಟನೆಗಳ ಸ್ಲೀಪರ್‌ ಸೆಲ್‌ಗಳು ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಗುರುತಿಸಿ, ನಾಶಗೊಳಿಸಲು ಘಟಕವೊಂದನ್ನು ಸ್ಥಾಪಿಸಲಾಗುವುದು’ ಎಂದು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.