ADVERTISEMENT

ಪುನರಾರಂಭವಾಗದ ಬಿಜೆಪಿ ಜಾಲತಾಣ

‘15 ದಿನಗಳ ಹಿಂದೆ ಹ್ಯಾಕ್: ಶೀಘ್ರ ಆನ್‌ಲೈನ್‌ಗೆ ಹಿಂತಿರುಗತ್ತೇವೆ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 19:44 IST
Last Updated 21 ಮಾರ್ಚ್ 2019, 19:44 IST
ಬಿಜೆಪಿ ಜಾಲತಾಣದ ಹೋಮ್ ಪೇಜ್
ಬಿಜೆಪಿ ಜಾಲತಾಣದ ಹೋಮ್ ಪೇಜ್   

ನವದೆಹಲಿ:ಹ್ಯಾಕರ್‌ಗಳ ದಾಳಿಗೆ ತುತ್ತಾಗಿ 15 ದಿನ ಕಳೆದರೂ ಬಿಜೆಪಿಯ ಅಧಿಕೃತ ಜಾಲತಾಣ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ.

ಬಿಜೆಪಿ ಜಾಲತಾಣದ ಪುಟದಲ್ಲಿ ‘ನಾವು ಶೀಘ್ರದಲ್ಲೇ ಹಿಂತಿರುಗುತ್ತೇವೆ’ ಮತ್ತು ‘ಅಡಚಣೆಗಾಗಿ ವಿಷಾದಿಸುತ್ತೇವೆ. ನಿರ್ವಹಣಾ ಕಾರ್ಯಕ್ಕಾಗಿ ಜಾಲತಾಣ
ವನ್ನು ಸ್ಥಗಿತಗೊಳಿಸಲಾಗಿದೆ. ನಾವು ಶೀಘ್ರದಲ್ಲೇ ಆನ್‌ಲೈನ್‌ಗೆ ಹಿಂತಿರುಗುತ್ತೇವೆ’ ಎಂಬ ಸಂದೇಶ ಬಿತ್ತರವಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡುವಂತೆ ಕಳುಹಿಸಿದ ಸಂದೇಶಕ್ಕೆ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ADVERTISEMENT

ಮಾರ್ಚ್ 5ರಂದು ಬಿಜೆಪಿಯ ಜಾಲತಾಣ ಹ್ಯಾಕ್ ಆಗಿತ್ತು. ಜಾಲತಾಣದ ಹೋಮ್‌ಪೇಜ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಛಾನ್ಸಲರ್ ಏಂಜೆಲಾ ಮರ್ಕೆಲ್ ಅವರ ಚಿತ್ರವಿರುವ ಮೀಮ್ ಬಿತ್ತರವಾಗುತ್ತಿತ್ತು. ಮಾರ್ಚ್ 5ರಂದೇ ಜಾಲತಾಣವನ್ನು ಸ್ಥಗಿತಗೊಳಿಸಲಾಯಿತು. ಆದರೆ ಈಗಲೂ ಆನ್‌ಲೈನ್‌ನಲ್ಲಿ ಜಾಲತಾಣ ಲಭ್ಯವಿಲ್ಲ.

ನಮ್ಮ ಜಾಲತಾಣ ಕೆಲವು ನಿಮಿಷಗಳಷ್ಟೇ ಹ್ಯಾಕ್ ಹಾಗಿತ್ತು. ಇದೇನು ದೊಡ್ಡ ಹ್ಯಾಕ್ ಅಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು.

ಆದರೆ ಭಾರಿ ಪ್ರಮಾಣದಲ್ಲಿ ದತ್ತಾಂಶ ಕಳವಾಗಿದ್ದರೆ, ಅವನ್ನು ಜಾಲತಾಣದಲ್ಲಿ ಮರುಸಂಯೋಜಿಸಲು ಸಾಕಷ್ಟು ಸಮಯ ಹಿಡಿಯುತ್ತದೆ ಎಂದು ಸೈಬರ್ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


* ಎಷ್ಟು ಪ್ರಮಾಣದ ದತ್ತಾಂಶ ಕಳವಾಗಿದೆ ಮತ್ತು ಜಾಲತಾಣದ ಸರ್ವರ್‌ ದೇಶದಲ್ಲೇ ಇದೆಯೇ ಅಥವಾ ವಿದೇಶದಲ್ಲಿ ಇದೆಯೇ ಎಂಬುದು ಬಹಳ ಮುಖ್ಯ. ಹ್ಯಾಕ್‌ಗೆ ತುತ್ತಾದ ಜಾಲತಾಣವನ್ನು ಮರುಸ್ಥಾ‍ಪಿಸಲು ತಗಲುವ ಸಮಯವನ್ನು ಈ ಅಂಶಗಳು ಪ್ರಭಾವಿಸುತ್ತವೆ

-ಅಮಿತ್ ಮಲ್ಹೋತ್ರಾ, ಸೈಬರ್ ಭದ್ರತಾ ತಜ್ಞ

* ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಜಾಲತಾಣಗಳು ಹ್ಯಾಕ್‌ಗೆ ತುತ್ತಾಗುವುದು ಮಾಮೂಲು. ಮತ್ತೆ ಹ್ಯಾಕ್‌ ಅಗದಂತೆ ಜಾಲತಾಣವನ್ನು ಮರುರೂಪಿಸುತ್ತಿರುವ ಸಾಧ್ಯತೆ ಇದೆ. ಮತ್ತೆ ಹ್ಯಾಕ್ ಆದರೆ ಆಗುವ ಮುಜುಗರವನ್ನು ತಪ್ಪಿಸಲು ಈ ರೀತಿ ಮಾಡುತ್ತಿರಬಹುದು

-ಮುಖೇಶ್ ಚೌಧರಿ (ಸೈಬರ್ ಭದ್ರತಾ ತಜ್ಞ), ಸೈಬರ್‌ಒಪ್ಸ್ ಇನ್ಫೊಸೆಕ್ ಸಿಇಒ

* ನಮ್ಮ ಜಾಲತಾಣವನ್ನು ಹಲವು ತಿಂಗಳಿಂದ ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. ಈಗ ಒಟ್ಟಾರೆಯಾಗಿ ಇಡೀ ಜಾಲತಾಣವನ್ನೇ ಮರುಸಂಯೋಜನೆ ಮಾಡಲಾಗುತ್ತಿದೆ. ಹೀಗಾಗಿ ಜಾಲತಾಣ ಪುನರಾರಂಭಕ್ಕೆ ವಿಳಂಬವಾಗುತ್ತಿದೆ

–ಬಿಜೆಪಿ ಮೂಲಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.