ADVERTISEMENT

ಅಮೇ‌ಥಿಯಲ್ಲಿ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:27 IST
Last Updated 10 ಏಪ್ರಿಲ್ 2019, 17:27 IST
ಅಮೇಠಿ ಲೊಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೇಠಿಯಲ್ಲಿ ರೋಡ್‌ ಶೋ ನಡೆಸಿದರು. ರಾಬರ್ಟ್‌ ವಾದ್ರಾ, ಪ್ರಿಯಾಂಕಾ ಗಾಂಧಿ ಹಾಗೂ ಅವರ ಮಕ್ಕಳು ಇದ್ದರು
ಅಮೇಠಿ ಲೊಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೇಠಿಯಲ್ಲಿ ರೋಡ್‌ ಶೋ ನಡೆಸಿದರು. ರಾಬರ್ಟ್‌ ವಾದ್ರಾ, ಪ್ರಿಯಾಂಕಾ ಗಾಂಧಿ ಹಾಗೂ ಅವರ ಮಕ್ಕಳು ಇದ್ದರು   

ಲಖನೌ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬುಧವಾರ ಅಮೇಠಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

ತಾಯಿ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ, ಆಕೆಯ ಪತಿ ರಾಬರ್ಟ್‌ ವಾದ್ರಾ ಹಾಗೂ ಮಕ್ಕಳು ಈ ಸಂದರ್ಭದಲ್ಲಿ ರಾಹುಲ್‌ ಅವರ ಜೊತೆಗಿದ್ದರು.

ಕೇಂದ್ರ ಸಚಿವೆ ಸ್ಮೃತಿಇರಾನಿ ಇಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದು, ರಾಹುಲ್‌ಗೆ ತೀವ್ರ ಸ್ಪರ್ಧೆ ನೀಡುವ ನಿರೀಕ್ಷೆ ಇದೆ. ಆ ಕಾರಣಕ್ಕೆ ನಾಮಪತ್ರ ಸಲ್ಲಿಕೆಯ ಸಂದರ್ಭವನ್ನು ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿಯೂ ಕಾಂಗ್ರೆಸ್‌ ಬಳಸಿಕೊಂಡಿದೆ. ಅಮೇಠಿಯ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸುವ ಮೂಲಕ ರಾಹುಲ್‌ ಅವರು ಗೌರಿಗಂಜ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿದರು.

ADVERTISEMENT

ಸೋನಿಯಾ ಅವರುಮೆರವಣಿಗೆಯಲ್ಲಿ ಪಾಲ್ಗೊಂಡಿರಲಿಲ್ಲ. ಬದಲಿಗೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು. ಮೆರವಣಿಗೆಯ ಸಂದರ್ಭದಲ್ಲಿರಸ್ತೆಯ ಇಕ್ಕೆಲದಲ್ಲಿ ಸಾಲುಗಟ್ಟಿ ನಿಂತಿದ್ದ ಜನರು ಕಾಂಗ್ರೆಸ್‌ ಪರ ಘೋಷಣೆಗಳನ್ನು ಕೂಗಿದರು. ಅಕ್ಕ ಪಕ್ಕದ ಮನೆಗಳವರು ಚಾವಣಿಗಳ ಮೇಲೆ ನಿಂತು ರಾಹುಲ್‌ ಮೇಲೆ ಹೂಮಳೆಗರೆದರು.

‘ಅಮೇಠಿಯಲ್ಲಿ ಸೋಲುವ ಭಯದಿಂದ ರಾಹುಲ್‌ ವಯನಾಡ್‌ನಲ್ಲೂ ಸ್ಪರ್ಧಿಸಿದ್ದಾರೆ’ ಎಂದು ಬಿಜೆಪಿಯವರು ಮಾಡಿದ್ದ ಟೀಕೆಗೆ ಪ್ರತ್ಯುತ್ತರವಾಗಿ ಈ ಮೆರವಣಿಗೆ ಆಯೋಜಿಸಲಾಗಿತ್ತು ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ. ‘ರಾಹುಲ್‌ ವಿರುದ್ಧ ಬಿಜೆಪಿ ಮಾಡಿರುವ ಟೀಕೆಗೆ ಈ ರ್‍ಯಾಲಿಯೇ ಉತ್ತರ ವಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಪ್ರಮೋದ್‌ ತಿವಾರಿ ಹೇಳಿದ್ದಾರೆ.

ಸ್ಮೃತಿ ಇರಾನಿ ಗುರುವಾರ(ಏ. 11) ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ. 2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಅವರು ಸ್ಮೃತಿ ಇರಾನಿ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಸೋಲಿನ ನಂತರವೂ ಸ್ಮೃತಿ ಅವರು ಇಲ್ಲಿನ ಜನರ ಜೊತೆ ನಿರಂತರ ಒಡನಾಟ ಇಟ್ಟುಕೊಂಡಿದ್ದರು.

ಚರ್ಚೆಗೆ ಬನ್ನಿ: ಮೋದಿಗೆ ಸವಾಲು

ಅಮೇಠಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ರಾಹುಲ್‌ ಗಾಂಧಿ, ರಫೇಲ್‌ ಭ್ರಷ್ಟಾಚಾರ ಮತ್ತು ನೋಟು ರದ್ದತಿ ವಿಚಾರವಾಗಿ ಮುಕ್ತ ಚರ್ಚೆಗೆ ಬರುವಂತೆ ಪ್ರಧಾನಿ ಮೋದಿಗೆ ಪುನಃ ಸವಾಲು ಹಾಕಿದ್ದಾರೆ.

‘ಮೋದಿಗೆ ನಾನು ನೇರ ಸವಾಲು ಹಾಕಲು ಇಚ್ಛಿಸುತ್ತೇನೆ. ನೀವು ಭ್ರಷ್ಟಾಚಾರ ನಡೆಸಿರುವುದು ನಿಜ ಎಂದು ಸುಪ್ರೀಂ ಕೋರ್ಟ್‌ ಸಹ ಹೇಳಿದೆ. ಬನ್ನಿ, ಆ ಬಗ್ಗೆ ಚರ್ಚೆ ಮಾಡೋಣ. ರಫೇಲ್‌ ಒಪ್ಪಂದ, ಭ್ರಷ್ಟಾಚಾರ ಹಾಗೂ ಅಮಿತ್‌ ಶಾ ಅವರ ಪುತ್ರನ ವ್ಯವಹಾರಗಳ ಬಗ್ಗೆ ದೇಶದ ಜನರಿಗೆ ನಿಜ ತಿಳಿಯಬೇಕಾಗಿದೆ’ ಎಂದು ರಾಹುಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.