ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಕಾರ್ಯಕರ್ತರಿಗೆ ಮೊರೆ!

ವೆಂಕಟೇಶ್ ಜಿ.ಎಚ್
Published 11 ಮಾರ್ಚ್ 2019, 3:54 IST
Last Updated 11 ಮಾರ್ಚ್ 2019, 3:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ:ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು, ಕಾಂಗ್ರೆಸ್‌ ಈಗ ಕಾರ್ಯಕರ್ತರ ಮೊರೆ ಹೋಗಿದೆ. ಜಿಲ್ಲೆಯ ಎಲ್ಲ ಬೂತ್‌ ಸಮಿತಿ ಅಧ್ಯಕ್ಷರಿಗೆ ಕಳೆದೊಂದು ವಾರದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೆಸರಿನಲ್ಲಿ ಧ್ವನಿ ಮುದ್ರಿತ ಕರೆ ಬಂದಿದ್ದು, ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ.

‘ಆತ್ಮೀಯ ಕಾಂಗ್ರೆಸ್ ಕಾರ್ಯಕರ್ತರೇ ನಮಸ್ಕಾರ’ ಎಂದು ಕರೆ ಆರಂಭವಾಗುತ್ತದೆ. ‘ಬರಲಿರುವ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಮತ ಕ್ಷೇತ್ರದಿಂದ ಯಾವ ಅಭ್ಯರ್ಥಿಯನ್ನು ಆ‌ಯ್ಕೆ ಮಾಡಲು ಇಚ್ಛಿಸುತ್ತೀರಿ. ನನ್ನ ಮಾತು ಮುಗಿದ ನಂತರ ಬೀಪ್‌ (ಶಬ್ದ) ಬರಲಿದೆ. ಆಗ ಧ್ವನಿ ಸಂದೇಶದ (ವಾಯ್ಸ್ ಮೇಲ್) ಮೂಲಕ ಒಬ್ಬ ವ್ಯಕ್ತಿಯ ಹೆಸರು ಮಾತ್ರ ಹೇಳಿ’ ಎಂದು ಕೇಳುತ್ತಿದ್ದಾರೆ.

‘ನನಗೂ ಕರೆ ಬಂದಿತ್ತು. ಗೆಲ್ಲಲು ಅವಕಾಶವಿರುವ ಅಭ್ಯರ್ಥಿ ಹೆಸರು ಸೂಚಿಸಿದ್ದೇನೆ’ ಎಂದು ಹುನಗುಂದ ತಾಲ್ಲೂಕು ಹಿರೇ
ಮ್ಯಾಗೇರಿ ಬೂತ್ ಸಮಿತಿ ಅಧ್ಯಕ್ಷ ಪ್ರಭು ಹಗರಟಗಿ ಹೇಳುತ್ತಾರೆ. ‘ಮೊದಲೆಲ್ಲಾ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹದ ಬಗ್ಗೆ ಸಭೆ ನಿಗದಿ ಮಾಡುತ್ತಿದ್ದರು. ಆಗ ಟಿಕೆಟ್ ಆಕಾಂಕ್ಷಿಗಳು ತಮ್ಮ ಹೆಸರನ್ನೇ ಸೂಚಿಸುವಂತೆ ಬೆಂಬಲಿಗರಿಗೆ ಮೊದಲೇ ಹೇಳಿ ಸಭೆಗೆ ಕರೆತರುತ್ತಿದ್ದರು. ಆದರೆ, ಹೊಸ ಕ್ರಮದಿಂದ ಗೆಲ್ಲಲು ಅವಕಾಶ ಇರುವವರನ್ನು ಅಭ್ಯರ್ಥಿಯಾಗಿಸಲು ನೆರವಾಗಲಿದೆ’ ಎನ್ನುತ್ತಾರೆ.

ADVERTISEMENT

‘ಈ ಬಾರಿ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿರುವ ಬಗ್ಗೆ ಜಿಲ್ಲಾ ಸಮಿತಿಗೂ ಮಾಹಿತಿ ನೀಡಿಲ್ಲ. ಹುನಗುಂದ ತಾಲ್ಲೂಕಿನ 214 ಬೂತ್‌ಗಳ ಅಧ್ಯಕ್ಷರೊಂದಿಗೆ ಕೆಪಿಸಿಸಿ ಅಧ್ಯಕ್ಷರೇ ನೇರ ಸಂಪರ್ಕ ಸಾಧಿಸಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಐಟಿ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರಭು ತಿಳಿಸಿದರು.

ಥ್ಯಾಂಕ್ಸ್ ಟು ಮೋದಿ!
‘ಪಕ್ಷದ ಇತಿಹಾಸದಲ್ಲಿಯೇ ಕಾರ್ಯಕರ್ತರಿಗೆ ಇಷ್ಟೊಂದು ಮನ್ನಣೆ ಸಿಗುತ್ತಿದೆ. ಇಲ್ಲಿಯವರೆಗೂ ಹೈಕಮಾಂಡ್ ಕಳಿಸಿದವರನ್ನು ಅಭ್ಯರ್ಥಿಯಾಗಿ ಸ್ವೀಕರಿಸುತ್ತಿದ್ದೆವು. ಈ ಬಾರಿ ನಮ್ಮ ಅಭಿಪ್ರಾಯಕ್ಕೆ ಮೊದಲ ಆದ್ಯತೆ ನೀಡುವಂತೆ ಎಐಸಿಸಿ ಅಧ್ಯಕ್ಷರು ಸೂಚಿಸಿದ್ದಾರಂತೆ. ಇದು ಸ್ವಾಗತಾರ್ಹ ಕ್ರಮ. ಇದರ ಶ್ರೇಯ ಖಂಡಿತ ಪ್ರಧಾನಿ ಮೋದಿಗೆ ಸಲ್ಲಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತರೊಬ್ಬರು ಚಟಾಕಿ ಹಾರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.