ADVERTISEMENT

ಪ್ರೀತಿ ಎಂದಿಗೂ ಕ್ಷಮೆಯಾಚಿಸದು: ಕಮಲ್‌ ಹಾಸನ್‌

ಪಿಟಿಐ
Published 28 ಮೇ 2025, 17:43 IST
Last Updated 28 ಮೇ 2025, 17:43 IST
   

ತಿರುವನಂತಪುರ: ‘ಕನ್ನಡ ಭಾಷೆ ಕುರಿತ ನನ್ನ ಹೇಳಿಕೆಗೆ ಅದರ ಮೇಲೆ ನನಗಿರುವ ಪ್ರೀತಿಯೇ ಕಾರಣ. ಪ್ರೀತಿ ಎಂದಿಗೂ ಕ್ಷಮೆ ಯಾಚಿಸುವುದಿಲ್ಲ’ ಎಂದು ನಟ ಹಾಗೂ ರಾಜಕಾರಣಿ ಕಮಲ್‌ ಹಾಸನ್‌ ಬುಧವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನನ್ನ ಹೇಳಿಕೆ ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುತ್ತಿರುವವರು ಈ ವಿಚಾರ ಕುರಿತು ಗೊಂದಲ ಉಂಟುಮಾಡುತ್ತಿದ್ದಾರೆ’ ಎಂದರು.

‘ನಾನು ಏನು ಹೇಳಿದ್ದೇನೋ ಅದನ್ನು ಪ್ರೀತಿ ಕಾರಣದಿಂದಾಗಿಯೇ ಹೇಳಿದ್ದೇನೆ ಎಂಬುದು ನನ್ನ ಭಾವನೆ. ಇತಿಹಾಸಕಾರರು ನನಗೆ ಭಾಷೆಯ ಚರಿತ್ರೆ ಬೋಧಿಸಿದ್ದಾರೆ. ಹೀಗಾಗಿ ಬೇರೆ ಯಾವ ಉದ್ದೇಶದಿಂದಲೂ ನಾನು ಹೇಳಿಲ್ಲ’ ಎಂದೂ ಹೇಳಿದರು.

‘ತಮಿಳುನಾಡು ಅಪರೂಪವಾದ ರಾಜ್ಯ. ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತದೆ. ಹಾಗಂತ ಇಂತಹ ರಾಜ್ಯ ಬೇರೆ ಇಲ್ಲ ಎಂದು ನಾನು ಹೇಳುವುದಿಲ್ಲ’ ಎಂದರು. ‘ಒಬ್ಬ ಮೆನನ್(ಎಂ.ಜಿ.ರಾಮಚಂದ್ರನ್) ಒಬ್ಬ ರೆಡ್ಡಿ (ಒಮಂದೂರ್ ರಾಮಸ್ವಾಮಿ ರೆಡ್ಡಿಯಾರ್) ನಮ್ಮ ಮುಖ್ಯಮಂತ್ರಿಯಾಗಿದ್ದರು. ತಮಿಳು ವ್ಯಕ್ತಿ ಎಂ.ಕರುಣಾನಿಧಿ ಹಾಗೂ ಮಂಡ್ಯ ಮೂಲದ ಕನ್ನಡ ಅಯ್ಯಂಗಾರ್ ಮಹಿಳೆ (ಜೆ.ಜಯಲಲಿತಾ) ಕೂಡ ನಮ್ಮ ಮುಖ್ಯಮಂತ್ರಿಯಾಗಿದ್ದರು’ ಎಂದು ಕಮಲ್‌ ಹಾಸನ್‌ ಹೇಳಿದರು.

ADVERTISEMENT
ಕರ್ನಾಟಕ ಮೂಲದ ಮುಖ್ಯಮಂತ್ರಿಯಿಂದ (ಜಯಲಲಿತಾ) ನನಗೆ ತೊಂದರೆಯಾಗಿದ್ದಾಗ ಕನ್ನಡಿಗರೇ ನನ್ನ ಬೆಂಬಲಕ್ಕೆ ನಿಂತಿದ್ದರು. ಕರ್ನಾಟಕಕ್ಕೆ ಬನ್ನಿ ನಿಮಗೆ ಮನೆ ಕೊಡುತ್ತೇವೆ ಎಲ್ಲಿಗೂ ಹೋಗಬೇಡಿ ಎಂದಿದ್ದರು. ಹೀಗಾಗಿ ಕನ್ನಡದ ಜನರು ಥಗ್‌ ಲೈಫ್ ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ಇದೆ
–ಕಮಲ್‌ ಹಾಸನ್, ನಟ
ಕಮಲ್‌ ಹಾಸನ್‌ ಹೇಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ. ಒಬ್ಬರ ವಿರುದ್ಧ ಪ್ರತಿಭಟಿಸುವ ಮೊದಲು ಇತಿಹಾಸ ತಿಳಿದುಕೊಳ್ಳಬೇಕು
ಎಸ್‌.ಸೀಮನ್, ಎನ್‌ಟಿಕೆ ಪಕ್ಷದ ಸಮನ್ವಯಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.