ADVERTISEMENT

ಲುಧಿಯಾನ ಸ್ಫೋಟ: ಸಮಾಜ ವಿರೋಧಿ ಶಕ್ತಿಗಳಿಗೆ ಸದ್ಯದಲ್ಲೇ ತಕ್ಕ ಉತ್ತರ– ಸಿಎಂ ಚನ್ನಿ

ಐಎಎನ್ಎಸ್
Published 23 ಡಿಸೆಂಬರ್ 2021, 13:38 IST
Last Updated 23 ಡಿಸೆಂಬರ್ 2021, 13:38 IST
   

ಚಂಡೀಗಡ: ಲುಧಿಯಾನದ ನ್ಯಾಯಾಲಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟವು ಗಾಬರಿ ಹುಟ್ಟಿಸುವ ಮತ್ತು ಭಯಾನಕ ಕೃತ್ಯವೆಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ರಾಜ್ಯದ ಶಾಂತಿಯುತ ವಾತಾವರಣವನ್ನು ಹದಗೆಡಿಸಲು ಶತ್ರುಗಳು ಈ ಸಂಚು ರೂಪಿಸಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಚನ್ನಿ ಕಿಡಿ ಕಾರಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಯಾರು ಈ ರೀತಿಯ ಸಂಚು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಪರಿಶ್ರಮದ ಬಳಿಕ ನೆಲೆಯೂರಿರುವ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಯತ್ನ ನಡೆಯುತ್ತಿದೆ ಎಂದು ಅವರ ಆರೋಪಿಸಿದರು.

ADVERTISEMENT

‘ಇಂತಹ ಕಿಡಿಗೇಡಿ ಕೃತ್ಯಗಳನ್ನು ಪ್ರತಿಯೊಬ್ಬರೂ ಖಂಡಿಸುವ ಸಮಯವಿದು’ಎಂದಿರುವ ಅವರು, ಈ ಹೇಡಿತನದ ಮತ್ತು ಅಮಾನವೀಯ ಕೃತ್ಯದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿರುವುದಾಗಿ ಹೇಳಿದರು. ಮುಂದೆ ಯಾರೂ ಈ ರೀತಿಯ ಕೃತ್ಯಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಲು ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹಾಳುಗೆಡವುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ರಾಜ್ಯದ ಸೌಹಾರ್ದತೆ, ಭ್ರಾತೃತ್ವ, ಶಾಂತಿ ಕದಡುವ ಸಮಾಜ ವಿರೋಧಿ ಶಕ್ತಿಗಳ ಬಗ್ಗೆ ಜನ ಜಾಗರೂಕರಾಗಿರಬೇಕು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅಮಾಯಕರನ್ನು ಗುರುಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳಿಗೆ ಅವಕಾಶ ನೀಡುವುದಿಲ್ಲ. ಸಮಾಜ ವಿರೋಧಿ ಶಕ್ತಿಗಳಿಗೆ ಸದ್ಯದಲ್ಲೇ ತಕ್ಕೆ ಉತ್ತರ ನೀಡಲಾಗುವುದು ಎಂದು ಚನ್ನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.