ADVERTISEMENT

ಬಾಲಕಿ ಸಮವಸ್ತ್ರ ತೆಗೆಸಿದ ಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 15:22 IST
Last Updated 25 ಸೆಪ್ಟೆಂಬರ್ 2022, 15:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಹ್‌ದೋಲ್‌, ಮಧ್ಯಪ್ರದೇಶ (ಪಿಟಐ): ಬುಡಕಟ್ಟು ಜನಾಂಗಕ್ಕೆ ಸೇರಿದ 10 ವರ್ಷ ವಯಸ್ಸಿನ ಬಾಲಕಿ ಧರಿಸಿದ್ದ ಸಮವಸ್ತ್ರ ಕೊಳೆಯಾಗಿದೆ ಎಂಬ ಕಾರಣಕ್ಕೆ ಇತರ ವಿದ್ಯಾರ್ಥಿಗಳ ಎದುರೇ ಬಾಲಕಿಯ ಸಮವಸ್ತ್ರ ತೆಗೆಸಿದ ಆರೋಪದ ಮೇಲೆ ಇಲ್ಲಿಯ ಬಾರಾ ಕಾಲಾ ಗ್ರಾಮದಲ್ಲಿ ಸರ್ಕಾರಿ ಶಾಲೆಯೊಂದರ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ. ಜೊತೆಗೆ, ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.‌

ಈ ಘಟನೆ ಶುಕ್ರವಾರ ನಡೆದಿದೆ. ಬಾಲಕಿಯ ಸಮವಸ್ತ್ರ ತೆಗೆಸಿ ಅದನ್ನು‌ ಶಿಕ್ಷಕ ಶ್ರವಣ್‌ ಕುಮಾರ್‌ ತ್ರಿಪಾಠಿ ತೊಳೆದಿದ್ದಾರೆ. ಬಳಿಕ ಘಟನೆಗೆ ಸಂಬಂಧಿಸಿದ ಚಿತ್ರಗಳನ್ನು ಬುಡಕಟ್ಟು ಜನಾಂಗ ಕಲ್ಯಾಣ ಇಲಾಖೆಯ ವಾಟ್ಸ್‌ಆ್ಯಪ್‌ ಗುಂಪಿಗೆ ಹಾಕಿದ್ದಾರೆ. ಅದರಲ್ಲಿ ಅವರನ್ನು ‘ಸ್ವಚ್ಛತಾ ಮಿತ್ರ’ ಎಂದು ಕರೆದುಕೊಂಡಿದ್ದಾರೆ. ಬಳಿಕ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಬಾಲಕಿ ಕೇವಲ ಒಳ ಉಡುಪಿನಲ್ಲಿ ಇರುವುದು ಮತ್ತು ಶಿಕ್ಷಕ ಶ್ರವಣ್‌ ಕುಮಾರ್‌ ತ್ರಿಪಾಠಿ ಅವರು ಆಕೆಯ ಸಮವಸ್ತ್ರವನ್ನು ತೊಳೆಯುತ್ತಿರುವುದು ಚಿತ್ರಗಳಲ್ಲಿ ಸೆರೆಯಾಗಿದೆ.

ಈ ಘಟನೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮವಸ್ತ್ರ ಒಣಗುವವರೆಗೆ ಸುಮಾರು ಎರಡು ಗಂಟೆಗಳ ಕಾಲ ಬಾಲಕಿ ಅದೇ ಸ್ಥಿತಿಯಲ್ಲಿ ಕುಳಿತಿದ್ದಳು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT

ಘಟನೆ ಕುರಿತು ಮಾಹಿತಿ ನೀಡಿದ ಮಧ್ಯಪ್ರದೇಶ ಬುಡಕಟ್ಟು ಜನಾಂಗ ಕಲ್ಯಾಣ ಇಲಾಖೆಯ ಸಹಾಯಕ ಆಯುಕ್ತ ಆನಂದ್‌ ರಾಯ್‌ ಸಿನ್ಹಾ ಅವರು, ಚಿತ್ರಗಳ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಶಿಕ್ಷಕ ಶ್ರವಣ್‌ ಅವರನ್ನು ಅಮಾನತು ಮಾಡಲಾಗಿದೆ ಮತ್ತು ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.