ADVERTISEMENT

ಮಹಾ ಮಳೆ: ಕೊಂಕಣ ರೈಲ್ವೆ ಸಂಚಾರ ಅಸ್ತವ್ಯಸ್ತ, ರೈಲುಗಳಲ್ಲಿರುವ 6,000 ಪ್ರಯಾಣಿಕರು

ಪಿಟಿಐ
Published 22 ಜುಲೈ 2021, 9:50 IST
Last Updated 22 ಜುಲೈ 2021, 9:50 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಮುಂಬೈ: ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ರತ್ನಗಿರಿ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಮಾರು 6,000 ಪ್ರಯಾಣಿಕರು ವಿವಿಧ ರೈಲುಗಳಲ್ಲಿ ಸಿಲುಕಿಕೊಂಡಿದ್ದಾರೆ.

ನದಿ ಉಕ್ಕಿ ಹರಿಯುತ್ತಿರುವುದರಿಂದ ಹಳಿಗಳು ಜಲಾವೃತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ 9 ರೈಲುಗಳ ಸೇವೆಯನ್ನು ನಿಯಂತ್ರಿಸಲಾಗಿದೆ. ಅಂದರೆ, ಕೆಲ ರೈಲುಗಳ ಸಂಚಾರವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದ್ದರೆ, ಕೆಲ ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಮತ್ತೆ ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ.

ಈ ರೈಲುಗಳು ವಿವಿಧ ನಿಲ್ದಾಣಗಳಲ್ಲಿ ಸುರಕ್ಷಿತ ಸ್ಥಳಗಳಲ್ಲಿವೆ. ಅವುಗಳಲ್ಲಿದ್ದ ಪ್ರಯಾಣಿಕರು ಸಹ ಸುರಕ್ಷಿತರಾಗಿದ್ದಾರೆ. ಅವರಿಗೆ ಆಹಾರ ಮತ್ತು ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಮಳೆಯ ಪರಿಣಾಮ ರತ್ನಗಿರಿಯ ಚಿಪ್ಲುನ್ ಮತ್ತು ಕಾಮಥೆ ನಿಲ್ದಾಣಗಳ ನಡುವಿನ ವಶಿಷ್ಠ ನದಿ ಸೇತುವೆಯಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟ ಮೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಈ ವಿಭಾಗದಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಕೊಂಕಣ ರೈಲ್ವೆ ಮಾರ್ಗದ ವಿವಿಧ ನಿಲ್ದಾಣಗಳಲ್ಲಿ 5,500-6,000 ಪ್ರಯಾಣಿಕರು ರೈಲುಗಳಲ್ಲಿ ಸಿಲುಕಿಕೊಂಡಿದ್ದಾರೆ.

ADVERTISEMENT

ಚಿಪ್ಲುನ್‌ನಲ್ಲಿನ ಪ್ರವಾಹ ಪರಿಸ್ಥಿತಿಯಿಂದಾಗಿ, ಇದುವರೆಗೆ ಒಂಬತ್ತು ದೂರದ ರೈಲುಗಳನ್ನು ನಿಯಂತ್ರಿಸಲಾಗಿದೆ ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ. ಈ ಪೈಕಿ ದಾದರ್-ಸಾವಂತ್ವಾಡಿ ವಿಶೇಷ ರೈಲು ಚಿಪ್ಲುನ್ ನಿಲ್ದಾಣದಲ್ಲಿ ಮತ್ತು ಖೇಡ್ ನಿಲ್ದಾಣದಲ್ಲಿ ಸಿಎಸ್ಎಂಟಿ-ಮಡ್ಗಾಂವ್ ಜನತಾಬ್ಡಿ ವಿಶೇಷ ರೈಲುಗಳನ್ನು ನಿಯಂತ್ರಿಸಲಾಗಿದೆ. ಈ ರೈಲುಗಳಲ್ಲಿನ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಕೊಂಕಣ ರೈಲ್ವೆ ವಕ್ತಾರ ಗಿರೀಶ್ ಕರಂದಿಕರ್ ಹೇಳಿದ್ದಾರೆ. ಹಲವಾರು ಸವಾಲುಗಳ ಹೊರತಾಗಿಯೂ, ಕೊಂಕಣ ರೈಲ್ವೆ ಈ ಮಾರ್ಗದ ರೈಲುಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಆಹಾರ ಮತ್ತು ನೀರನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು. ಎಲ್ಲ ಪ್ರಯಾಣಿಕರಿಗೆ ಚಹಾ, ತಿಂಡಿ ಮತ್ತು ನೀರು ಒದಗಿಸಲು ನಾವು ವ್ಯವಸ್ಥೆ ಮಾಡಿದ್ದೇವೆ ಎಂದು ಕರಂಡಿಕರ್ ಹೇಳಿದರು.

ಕಳೆದ ಕೆಲವು ದಿನಗಳಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಇದು ಎರಡನೇ ಅಡೆತಡೆಯಾಗಿದೆ. ಜುಲೈ 19 ರಂದು ಪಣಜಿ ಬಳಿಯ ಹಳೆಯ ಗೋವಾ ಸುರಂಗದಲ್ಲಿ ನೀರು ತುಂಬಿದ್ದರಿಂದ ಆ ಮಾರ್ಗದ ರೈಲು ಸೇವೆಗಳನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು.

ಕೊಂಕಣ ರೈಲ್ವೆಯು ಮುಂಬೈ ಬಳಿಯ ರೋಹಾದಿಂದ ಮಂಗಳೂರು ಸಮೀಪದ ಥೋಕೂರ್‌ವರೆಗೆ 756 ಕಿ.ಮೀ ಉದ್ದದ ಟ್ರ್ಯಾಕ್ ಹೊಂದಿದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಮೂರು ರಾಜ್ಯಗಳಲ್ಲಿ ಹರಡಿರುವ ಈ ಮಾರ್ಗವು ಸವಾಲಿನ ಮಾರ್ಗಗಳಲ್ಲಿ ಒಂದಾಗಿದೆ. ಏಕೆಂದರೆ, ಈ ಪ್ರದೇಶ ಅನೇಕ ನದಿಗಳು, ಕಮರಿಗಳು ಮತ್ತು ಪರ್ವತಗಳನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.