ADVERTISEMENT

ಕೋವಿಡ್‌ ಮಹಾರಾಷ್ಟ್ರ ಗರಿಷ್ಠ ಮಿತಿ ದಾಟಿದೆ: ವರದಿ

​ಪ್ರಜಾವಾಣಿ ವಾರ್ತೆ
Published 16 ಮೇ 2021, 6:47 IST
Last Updated 16 ಮೇ 2021, 6:47 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಮುಂಬೈ: ಕೋವಿಡ್‌–19 ಪಿಡುಗಿನಿಂದ ತತ್ತರಿಸಿರುವ ಮಹಾರಾಷ್ಟ್ರ, ಸೋಂಕಿನ ಎರಡನೇ ಅಲೆಗೆ ಸಂಬಂಧಿಸಿದಂತೆ ಗರಿಷ್ಠ ಮಿತಿಯನ್ನು ದಾಟಿದೆ ಎಂದು ‘ಆರ್ಗನೈಸ್ಡ್‌ ಮೆಡಿಸಿನ್‌ ಅಕಾಡೆಮಿಕ್‌ ಗಿಲ್ಡ್‌’ (ಒಎಂಎಜಿ) ಹೇಳಿದೆ.

ಒಎಂಎಜಿ ಎಂಬುದು ಸ್ನಾತಕೋತ್ತರ ಪದವಿ ಪಡೆದಿರುವ ವೈದ್ಯರ ಸಂಘಗಳ ಒಕ್ಕೂಟವಾಗಿದೆ.

‘ಬೇರೆ ಬೇರೆ ಮಾನದಂಡಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಮುಂಬೈ ಹಾಗೂ ರಾಜ್ಯದ ಇತರ ಭಾಗಗಳು ಸೇರಿದಂತೆ ಮಹಾರಾಷ್ಟ್ರವು ಏಪ್ರಿಲ್‌ 11ರಿಂದ 25ರ ನಡುವಿನ ಅವಧಿಯಲ್ಲಿ ಗರಿಷ್ಠ ಮಿತಿಯನ್ನು ದಾಟಿದ್ದಿರಬಹುದು. ಇಲ್ಲವೇ, ಒಂದೇ ದಿನದಲ್ಲಿ ಗರಿಷ್ಠ ಪ್ರಕರಣಗಳು ವರದಿಯಾದ ಏ. 18ರಂದು ಈ ಮಿತಿ ದಾಟಿರಬಹುದು’ ಎಂದು ಸಂಘಟನೆ ಹೇಳಿದೆ.

ADVERTISEMENT

‘ಕೊರೊನಾ ಸೋಂಕು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮುಂಬೈ ನಗರವಂತೂ ಗರಿಷ್ಠ ಮಿತಿಯನ್ನು ದಾಟಿದೆ. ಕೆಲವು ಇತರ ಜಿಲ್ಲೆಗಳೂ ಇದೇ ಸಾಲಿನಲ್ಲಿವೆ’ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಈಶ್ವರ್‌ ಗಿಲಾಡ ಹೇಳಿದರು.

ಸೋಂಕಿನ ಗರಿಷ್ಠ ಮಿತಿಯನ್ನು ಸಮೀಪಿಸುತ್ತಿರುವ ಜಿಲ್ಲೆಗಳ ಪೈಕಿ ಅಹ್ಮದ್‌ನಗರ, ನಾಸಿಕ್‌, ಸೊಲ್ಲಾಪುರ, ಸಾಂಗ್ಲಿ, ಸಾತಾರ, ಕೊಲ್ಹಾಪುರ, ಅಮರಾವತಿ, ಬುಲ್ಧಾನ, ಬೀಡ್‌, ಚಂದ್ರಾಪುರ, ಜಲ್ನಾ ಹಾಗೂ ಪರ್ಭನಿ ಪ್ರಮುಖವಾದವುಗಳಾಗಿವೆ.

ದೈನಂದಿನ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದರೂ, ಈ ಪಟ್ಟಿಯಲ್ಲಿ ಪುಣೆ ಅಗ್ರಸ್ಥಾನದಲ್ಲಿದೆ ಎಂದು ಸಂಘಟನೆ ಹೇಳಿದೆ.

ಛತ್ತೀಸಗಡ, ದೆಹಲಿ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳು ಸಹ ಈ ಮಿತಿಯನ್ನು ದಾಟಿರಬಹುದು ಎಂದೂಸಂಘಟನೆ ತಿಳಿಸಿದೆ.

‘ಇನ್ನೂ ಹಲವಾರು ರಾಜ್ಯಗಳು ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗುವ ಅಪಾಯ ಎದುರಿಸುತ್ತಿವೆ. ಹೀಗಾಗಿ ಕಠಿಣ ನಿರ್ಬಂಧಗಳನ್ನು, ವೈಯಕ್ತಿಕ ರಕ್ಷಣಾ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಮಾಸ್ಕ್‌ ಧರಿಸುವುದರಿಂದ, ಅನೇಕ ಬಾರಿ ರೂಪಾಂತರಗೊಂಡಿರುವ ಕೊರೊನಾ ವೈರಸ್‌ನಿಂದಾಗುವ ಸೋಂಕಿನಿಂದ ರಕ್ಷಣೆ ಸಿಗುತ್ತದೆ’ ಎಂದೂ ಹೇಳಿದರು.

‘ಎಲ್ಲರೂತ್ವರಿತವಾಗಿ ಲಸಿಕೆ ಹಾಕಿಸಿಕೊಂಡರೆ, ಮೂರನೇ ಅಲೆ ಕಂಡುಬರುವ ಸಾಧ್ಯತೆಗಳೂ ಕ್ಷೀಣಿಸುತ್ತವೆ’ ಎಂದುಗಿಲಾಡ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.