ADVERTISEMENT

ಮಹಾರಾಷ್ಟ್ರ ಸಚಿವೆಗೆ 3 ತಿಂಗಳು ಕಠಿಣ ಜೈಲು ಶಿಕ್ಷೆ

ಎಂಟು ವರ್ಷದ ಹಿಂದೆ ಪೊಲೀಸ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ಪ್ರಕರಣದಲ್ಲಿ ತೀರ್ಪು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 12:48 IST
Last Updated 16 ಅಕ್ಟೋಬರ್ 2020, 12:48 IST
ಯಶೋಮತಿ ಠಾಕೂರ್‌
ಯಶೋಮತಿ ಠಾಕೂರ್‌   

ಮುಂಬೈ: ಎಂಟು ವರ್ಷಗಳ ಹಿಂದೆ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್‌ ಅವರಿಗೆ ಮೂರು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.

ಕಾಂಗ್ರೆಸ್‌ ಶಾಸಕಿಯಾಗಿರುವ ಠಾಕೂರ್‌, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ್ಯಾಧ್ಯಕ್ಷೆಯೂ ಆಗಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌–ಎನ್‌ಸಿಪಿ ಹಾಗೂ ಶಿವಸೇನಾ ಮೈತ್ರಿ ಸರ್ಕಾರವನ್ನು ಈ ತೀರ್ಪು ಮುಜುಗರಕ್ಕೀಡುಮಾಡಿದೆ.

2012ರಲ್ಲಿ ಘಟನೆ: ಅಮರಾವತಿ ಜಿಲ್ಲೆಯ ರಾಜಾಪೇಠ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಅಂಬಾದೇವಿ ದೇವಸ್ಥಾನದ ಸಮೀಪ 2012ರ ಮಾರ್ಚ್‌ 24ರಂದು ಸಂಜೆ 4.15ರ ವೇಳೆಗೆ ಠಾಕೂರ್‌ ಹಾಗೂ ಅವರ ಬೆಂಬಲಿಗರು ಕರ್ತವ್ಯದಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಉಲ್ಲಾಸ್‌ ರೊರಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವಿತ್ತು. ಏಕಮುಖ ರಸ್ತೆಯಲ್ಲಿ ವಿರುದ್ಧವಾಗಿ ಸಂಚರಿಸದಂತೆ ಠಾಕೂರ್‌ ಅವರಿದ್ದ ಕಾರನ್ನು ಕಾನ್‌ಸ್ಟೆಬಲ್‌ ತಡೆದಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಅಮರಾವತಿ ಜಿಲ್ಲಾ ನ್ಯಾಯಾಧೀಶರಾದ ಉರ್ಮಿಳಾ ಜೋಶಿ ಅವರು ಠಾಕೂರ್‌ ಸೇರಿದಂತೆ ಅವರ ಚಾಲಕ ಸಾಗರ್‌ ಸುರೇಶ್‌ ಖಂಡೇಕರ್‌ ಹಾಗೂ ಬೆಂಬಲಿಗರಾದ ಶರದ್‌ ಕಾಶಿರಾವ್‌ ಜವಾನ್‌ಲಾಲ್‌ ಹಾಗೂ ರಾಜು ಕಿಸಾನ್‌ ಇನ್‌ಗಲ್‌ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿ, ತಲಾ ₹15 ಸಾವಿರ ದಂಡ ವಿಧಿಸದ್ದಾರೆ.

‘ನ್ಯಾಯಾಂಗವನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ನಾನು ವಕೀಲೆಯಾಗಿದ್ದು, ಈ ತೀರ್ಪಿನ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ. ಈ ಕುರಿತು ಬೇರೇನೂ ಹೇಳುವುದಿಲ್ಲ. ಸತ್ಯ ಯಾವತ್ತೂ ಗೆಲ್ಲಲಿದೆ’ ಎಂದು ಅಮರಾವತಿ ಜಿಲ್ಲೆಯ ಉಸ್ತುವಾರಿ ಸಚಿವೆಯೂ ಆಗಿರುವ ಠಾಕೂರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.