ಸಾಮಾಜಿಕ ಮಾಧ್ಯಮಗಳು
ತಿರುವನಂತಪುರ: ‘ಆಪರೇಷನ್ ಸಿಂಧೂರ’ವನ್ನು ಟೀಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ನಾಗ್ಪುರದಲ್ಲಿ ಬಂಧಿಸಲಾಗಿರುವ ಕೊಚ್ಚಿ ಮೂಲದ ವ್ಯಕ್ತಿಯ ಮನೆಯ ಮೇಲೆ ಮಹಾರಾಷ್ಟ್ರ ಪೊಲೀಸರ ತಂಡ ಶೋಧ ಕಾರ್ಯಾಚರಣೆ ನಡೆಸಿದೆ.
ಕೊಚ್ಚಿಯ ಎಡಪ್ಪಲ್ಲಿಯ ರೆಜಾಜ್ ಎಂ ಶೀಬಾ ಸೈದಿಕ್ (26) ಅವರ ನಿವಾಸದ ಮೇಲೆ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ ಭಾನುವಾರ ರಾತ್ರಿ ಶೋಧ ನಡೆಸಿದೆ. ಈ ವೇಳೆ ದೊರೆತ ದಾಖಲೆಗಳು ಮತ್ತು ‘ಗ್ಯಾಜೆಟ್’ಗಳನ್ನು ವಶಕ್ಕೆ ಪಡೆದಿವೆ ಎಂದು ಮೂಲಗಳು ತಿಳಿಸಿವೆ.
ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ರೆಜಾಜ್ ಅವರನ್ನು ಕಳೆದ ವಾರ ನಾಗ್ಪುರದ ಹೋಟೆಲ್‌ನಲ್ಲಿ ಪೊಲೀಸರು ಬಂಧಿಸಿದ್ದರು. ರೆಜಾಜ್, ನಕ್ಸಲ್ ಪರ ಸಹಾನುಭೂತಿಯುಳ್ಳ ವ್ಯಕ್ತಿಯಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಸರ್ಕಾರದ ವಿರುದ್ಧ ಯುದ್ಧಕ್ಕೆ ಸಿದ್ಧತೆ ನಡೆಸಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 149 ಮತ್ತು ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ಮಾಡಿದ್ದಕ್ಕೆ ಸೆಕ್ಷನ್ 192 ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಹಲ್ಗಾಮ್ ಭಯೋತ್ಪಾದಕರ ದಾಳಿ ಬಳಿಕ, ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಂಬಂಧಿಸಿದ ಮನೆಗಳನ್ನು ತೆರವುಗೊಳಿಸಿದ ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟಿಸಿದ್ದಕ್ಕಾಗಿ ಕೊಚ್ಚಿಯಲ್ಲಿ ರೆಜಾಜ್ ಮತ್ತು ಇತರರ ವಿರುದ್ಧ ಕಳೆದ ತಿಂಗಳು ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.