ADVERTISEMENT

‘ಪರಿಣತ ಪ್ರಾಧ್ಯಾಪಕರ’ ನೇಮಕಾತಿ: ಕಾನೂನುಗಳಲ್ಲಿ ಬದಲಾವಣೆಗೆ ಯುಜಿಸಿ ಸೂಚನೆ

ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆದ ಯುಜಿಸಿ

ಪಿಟಿಐ
Published 14 ನವೆಂಬರ್ 2022, 13:48 IST
Last Updated 14 ನವೆಂಬರ್ 2022, 13:48 IST
ಯುಜಿಸಿ
ಯುಜಿಸಿ   

ನವದೆಹಲಿ (ಪಿಟಿಐ): ದೇಶದ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ವಿವಿಧ ಕ್ಷೇತ್ರಗಳ ‘ಪರಿಣತ ಪ್ರಾಧ್ಯಾಪಕ’ರನ್ನು (ಪ್ರೊಫೆಸರ್ಸ್‌ ಆಫ್‌ ಪ್ರಾಕ್ಟೀಸ್–ಪಿಒಪಿ) ಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪೂರಕವಾಗಿ ತಮ್ಮ ಕಾಯ್ದೆ ಮತ್ತು ಸುಗ್ರೀವಾಜ್ಞೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಂತೆವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸೂಚಿಸಿದೆ.

ಉನ್ನತ ಶಿಕ್ಷಣ ಸಂಸ್ಥೆಗಳು ವಿವಿಧ ಕ್ಷೇತ್ರಗಳ ತಜ್ಞರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡಲು ಯುಜಿಸಿ ‘ಪ್ರೊಫೆಸರ್ಸ್‌ ಆಫ್‌ ಪ್ರಾಕ್ಟೀಸ್’ ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿದೆ. ಅವರನ್ನು ತೊಡಗಿಸಿಕೊಳ್ಳುವ ಸಂಬಂಧ ಈಗಾಗಲೇ ಮಾರ್ಗಸೂಚಿಯನ್ನೂ ಹೊರಡಿಸಿದೆ ಎಂದು ಯುಜಿಸಿ ಕಾರ್ಯದರ್ಶಿ ಪಿ.ಕೆ.ಠಾಕೂರ್‌ ಎಲ್ಲ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

‘ವಿಶ್ವವಿದ್ಯಾಲಯಗಳ ಕುಲಪತಿಗಳು, ಕಾಲೇಜುಗಳ ಪ್ರಾಂಶುಪಾಲರು ತಮ್ಮ ಸಂಸ್ಥೆಗಳಲ್ಲಿ ‘ಪಿಒಪಿ’ಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ತಮ್ಮ ಕಾನೂನು, ಸುಗ್ರೀವಾಜ್ಞೆ, ನಿಯಮ ಮತ್ತು ನಿಬಂಧನೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಈ ಸಂಬಂಧ ತಾವು ತೆಗೆದುಕೊಂಡ ಕ್ರಮಗಳ ಕುರಿತ ವರದಿಯನ್ನು ಸಲ್ಲಿಸುವಂತೆಯೂ ಸೂಚಿಸಿದ್ದಾರೆ.

ADVERTISEMENT

ಈಗಾಗಲೇ ವಿಶ್ವದ ಹಲವೆಡೆ ‘ಪರಿಣತ ಪ್ರಾಧ್ಯಾಪಕ’ (ಪಿಒಪಿ) ಹುದ್ದೆಗಳು ಚಾಲ್ತಿಯಲ್ಲಿವೆ. ಮೆಸ್ಸಾಚುಸೆಟ್ಸ್‌ ತಾಂತ್ರಿಕ ಸಂಸ್ಥೆ (ಎಂಐಟಿ), ಹಾರ್ವರ್ಡ್‌ ವಿಶ್ವವಿದ್ಯಾಲಯ, ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯ, ಲಂಡನ್ನಿನ ಎಸ್‌ಒಎಎಸ್‌ ವಿಶ್ವವಿದ್ಯಾಲಯ, ಕಾರ್ನೆಲ್‌ ವಿಶ್ವವಿದ್ಯಾಲಯ, ಹೆಲ್ಸಿಂಕಿ ವಿಶ್ವವಿದ್ಯಾಲಯ ಸೇರಿದಂತೆ ಹಲವೆಡೆ ಈ ಹುದ್ದೆಗಳಿವೆ. ಅಂತೆಯೇ ಭಾರತದ ದೆಹಲಿ, ಮದ್ರಾಸ್‌ ಮತ್ತು ಗುವಹಾಟಿ ವಿಶ್ವವಿದ್ಯಾಲಯಗಳಲ್ಲೂ ಈ ಹುದ್ದೆಗಳಿವೆ ಎಂದು ಯುಜಿಸಿ ತಿಳಿಸಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಪರಿಣತ ಪ್ರಾಧ್ಯಾಪಕರು’ ಕೆಟಗರಿಯಡಿ ನೇಮಕಗೊಳ್ಳುವವರಿಗೆ ಔಪಚಾರಿಕ ಶೈಕ್ಷಣಿಕ ಅರ್ಹತೆ ಮತ್ತು ಅಗತ್ಯ ಸಂಖ್ಯೆಯಷ್ಟು ಸಂಶೋಧನಾ ಕೃತಿಗಳನ್ನು ಪ್ರಕಟಿಸಿರಬೇಕು ಎಂಬ ಅರ್ಹತೆಗಳು ಕಡ್ಡಾಯವಾಗಿರುವುದಿಲ್ಲ ಎಂದು ಯುಜಿಸಿ ಕಳೆದ ತಿಂಗಳು ಪ್ರಕಟಿಸಿದ್ದ ಮಾರ್ಗಸೂಚಿಯಲ್ಲಿ ತಿಳಿಸಿತ್ತು.

‘ಪರಿಣತ ಪ್ರಾಧ್ಯಾಪಕರ’ ಸಂಖ್ಯೆಯು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಮಂಜೂರಾದ ಒಟ್ಟು ಹುದ್ದೆಗಳ ಶೇ 10ಕ್ಕಿಂತ ಹೆಚ್ಚಿರಬಾರದು. ಉದ್ದಿಮೆಗಳಿಂದ ಹಣಕಾಸು ನೆರವು ಹೊಂದಿರುವ, ಸಂಸ್ಥೆಗಳೇ ಸಂಪನ್ಮೂಲ ಭರಿಸುತ್ತಿರುವ ಹಾಗೂ ಗೌರವ ಬೋಧಕರ ವರ್ಗಗಳಡಿ ‘ಪರಿಣತ ಪ್ರಾಧ್ಯಾಪಕರ’ನ್ನು ನೇಮಕ ಮಾಡಿಕೊಳ್ಳಬಹುದು. ಈ ‘ಪ್ರಾಧ್ಯಾಪಕ’ರ ಗರಿಷ್ಠ ಸೇವಾವಧಿ ಮೂರು ವರ್ಷ ಮೀರಬಾರದು. ವಿಶೇಷ ಸಂದರ್ಭಗಳಲ್ಲಿ ಮಾತ್ರ ಒಂದು ವರ್ಷದವರೆಗೆ ಸೇವಾವಧಿಯನ್ನು ವಿಸ್ತರಿಸಬಹುದು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿತ್ತು.

‘ಪಿಒಪಿ’ ಹದ್ದೆಗಳು ಸಂಸ್ಥೆಯಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ ಮತ್ತು ನಿಯಮಿತ ಅಧ್ಯಾಪಕರ ನೇಮಕಾತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಅಲ್ಲದೆ ಬೋಧನಾ ಹುದ್ದೆಯಲ್ಲಿ ಇರುವವರಿಗೆ ಅಥವಾ ನಿವೃತ್ತರಾದವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಯುಜಿಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.