ADVERTISEMENT

ಮಹಾ ಸಿಎಂ ಶಿಂದೆಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ: ಫಡಣವೀಸ್

ಪಿಟಿಐ
Published 3 ಅಕ್ಟೋಬರ್ 2022, 8:53 IST
Last Updated 3 ಅಕ್ಟೋಬರ್ 2022, 8:53 IST
ದೇವೇಂದ್ರ ಫಡಣವೀಸ್
ದೇವೇಂದ್ರ ಫಡಣವೀಸ್   

ನಾಗ್ಪುರ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೋಮವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ವಿರುದ್ಧದ ಎಲ್ಲಾ ಬೆದರಿಕೆಗಳನ್ನು ತಮ್ಮ ನೇತೃತ್ವದ ರಾಜ್ಯ ಗೃಹ ಇಲಾಖೆಯು ಅರಿತುಕೊಂಡಿದೆ. ಮುಖ್ಯಮಂತ್ರಿಗಳ ಭದ್ರತೆ ಮತ್ತಿತರ ಅಂಶಗಳ ಬಗ್ಗೆ ಸಂಪೂರ್ಣ ಗಮನ ಹರಿಸುತ್ತಿದ್ದು, ಸಿಎಂ ಭದ್ರತೆ ಅತ್ಯಂತ ಮಹತ್ವದ್ದಾಗಿದೆ. ನಿನ್ನೆ ಸಿಎಂಗೆ ಧಮ್ಕಿ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದರು.

ಬಂಧಿತ ವ್ಯಕ್ತಿಗೆ ಸಂಬಂಧಿಸಿದಂತೆ ಫಡಣವೀಸ್ ವಿವರಗಳನ್ನು ಹಂಚಿಕೊಳ್ಳದಿದ್ದರೂ, ಪುಣೆಯ ಲೋನಾವಾಲಾದ ಹೋಟೆಲ್‌ನಲ್ಲಿ ಸಿಎಂ ಶಿಂಧೆಯನ್ನು ಕೊಲ್ಲಲು ಸಂಚು ಎಂದು ಆರೋಪಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ವ್ಯಕ್ತಿಯ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಬಂಧಿತ ಅವಿನಾಶ್ ವಾಘಮಾರೆ ಎಂಬ ವ್ಯಕ್ತಿ ಮದ್ಯಪಾನ ಮಾಡಿ, ನೀರಿನ ಬಾಟಲಿಗೆ ಹೆಚ್ಚಿನ ಶುಲ್ಕ ವಿಧಿಸಿದ್ದಾರೆ ಎಂಬ ಕಾರಣಕ್ಕೆ ಹೋಟೆಲ್ ಮಾಲೀಕರಿಗೆ ಪಾಠ ಕಲಿಸಲು ಶನಿವಾರ ಕರೆ ಮಾಡಿ ಈ ರೀತಿ ಹೇಳಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಮುಖ್ಯಮಂತ್ರಿಯ ಜೀವಕ್ಕೆ ಬೆದರಿಕೆಯ ಕುರಿತು ರಾಜ್ಯ ಗುಪ್ತಚರ ಇಲಾಖೆ (ಎಸ್‌ಐಡಿ) ಶನಿವಾರ ನಿರ್ದಿಷ್ಟ ಮಾಹಿತಿ ಪಡೆದಿದ್ದು, ಅದರ ನಂತರ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಝಡ್ ಪ್ಲಸ್ ಕೆಟಗರಿ ಭದ್ರತೆಯನ್ನು ಹೊಂದಿರುವ ಸಿಎಂಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಎಸ್‌ಐಡಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಥಾಣೆಯಲ್ಲಿರುವ ಶಿಂದೆ ಅವರ ಖಾಸಗಿ ನಿವಾಸ ಮತ್ತು ಮುಂಬೈನ ಅಧಿಕೃತ ನಿವಾಸ ವರ್ಷಾದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.