ಛತ್ರಪತಿ ಸಂಭಾಜಿ ನಗರ, ಮಹಾರಾಷ್ಟ್ರ: ಈ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿ 269 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಇದೇ ಅವಧಿಯಲ್ಲಿ 204 ಮಂದಿ ಮೃತಪಟ್ಟಿದ್ದರು ಎಂದು ವಿಭಾಗೀಯ ಆಯುಕ್ತರ ಕಚೇರಿ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
ಮರಾಠವಾಡ ವಿಭಾಗವು 8 ಜಿಲ್ಲೆಗಳನ್ನು ಒಳಗೊಂಡಿದ್ದು, ಕಡಿಮೆ ಮಳೆ ಹಾಗೂ ನೀರಿನ ಕೊರತೆಯಿಂದ ‘ಅರೆ ಶುಷ್ಕ ವಲಯ’ವಾಗಿ ಗುರುತಿಸಿಕೊಂಡಿದೆ.
ಬೀಡ್ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಈ ವರ್ಷದ ಮೂರು ತಿಂಗಳಲ್ಲಿ 71 ಮಂದಿ ಮೃತಪಟ್ಟಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 44 ಮಂದಿ ಮೃತಪಟ್ಟಿದ್ದರು.
ಬೀಡ್ (71), ಛತ್ರಪತಿ ಸಂಭಾಜಿ ನಗರ (50), ನಾಂದೇಡ್ (37), ಪರ್ಭಾಣಿ(33), ಧಾರಾಶಿವ (31), ಲಾತೂರ್ (18), ಹಿಂಗೋಲಿ (16), ಜಲ್ನಾ (13) ಮಂದಿ ಮೃತಪಟ್ಟಿದ್ದಾರೆ.
‘ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವು ರೈತರ ಆತ್ಮಹತ್ಯೆ ತಡೆಯುವಲ್ಲಿ ಸಂಪೂರ್ಣವಾಗಿ ವೈಫಲ್ಯವಾಗಿದ್ದು, ಕೂಡಲೇ ರೈತರ ಸಾಲಮನ್ನಾ ಮಾಡಬೇಕು’ ಎಂದು ರೈತಪರ ಸಂಘಟನೆ ಶೇತ್ಕರಿ ಸಂಘಟನೆ ಅಧ್ಯಕ್ಷ ರಾಜು ಶೆಟ್ಟಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.