ADVERTISEMENT

ಪುಣೆ: 17 ಮಹಿಳಾ ಕೆಡೆಟ್‌ಗಳಿಂದ ಐತಿಹಾಸಿಕ ಸಾಧನೆ

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಮೊದಲ ಬಾರಿ ತರಬೇತಿ ಪಡೆದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 30 ಮೇ 2025, 15:30 IST
Last Updated 30 ಮೇ 2025, 15:30 IST
ಮೊದಲ ಬ್ಯಾಚ್‌ನ ಮಹಿಳಾ ಕೆಡೆಟ್‌ಗಳು ಪುಣೆ ಮೂಲದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ (ಎನ್‌ಡಿಎ) ಶುಕ್ರವಾರ ಪದವಿ ಪಡೆದರು –ಪಿಟಿಐ ಚಿತ್ರ
ಮೊದಲ ಬ್ಯಾಚ್‌ನ ಮಹಿಳಾ ಕೆಡೆಟ್‌ಗಳು ಪುಣೆ ಮೂಲದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ (ಎನ್‌ಡಿಎ) ಶುಕ್ರವಾರ ಪದವಿ ಪಡೆದರು –ಪಿಟಿಐ ಚಿತ್ರ   

ಪುಣೆ: ಹದಿನೇಳು ಮಹಿಳಾ ಕೆಡೆಟ್‌ಗಳು ಇದೇ ಮೊದಲ ಬಾರಿಗೆ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ (ಎನ್‌ಡಿಎ) ಶುಕ್ರವಾರ ತರಬೇತಿ ಪಡೆಯುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದರು.

ಅಕಾಡೆಮಿಯಲ್ಲಿ ಶುಕ್ರವಾರ ನಡೆದ ತರಬೇತಿ ಅಂಗವಾಗಿ ನಡೆದ ಅಂತಿಮ ಪರೇಡ್‌ನಲ್ಲಿ ಪುರುಷರೂ ಸೇರಿ 1,341 ಮಂದಿ ಭಾಗಿಯಾಗಿದ್ದರು. 

ಖಡಕವಾಸ್ಲಾದಲ್ಲಿರುವ ಸೇನಾಪಡೆಗಳ ತರಬೇತಿ ಕೇಂದ್ರದ ಖೇತ್ರಪಾಲ್‌ ಪರೇಡ್‌ ಮೈದಾನದಲ್ಲಿ ಪಥಸಂಚಲನ ನಡೆಯಿತು. ಕೆಡೆಟ್‌ಗಳು ಅತ್ಯಂತ ಕರಾರುವಕ್ಕಾಗಿ ಮತ್ತು ಶಿಸ್ತಿನಿಂದ ಹೆಜ್ಜೆ ಹಾಕಿದರು.

ADVERTISEMENT

ಅಕಾಡೆಮಿಯ ಕೆಡೆಟ್‌ ಕ್ಯಾಪ್ಟನ್‌ ಉದಯವೀರ್‌ ಸಿಂಗ್‌ ನೇಗಿ ಅವರು ಪರೇಡ್‌ ಮುನ್ನಡೆಸಿದರು. ಸೇನಾಪಡೆಯ ಮಾಜಿ ಮುಖ್ಯಸ್ಥ, ಮಿಜೋರಾಂ ರಾಜ್ಯಪಾಲ ಜನರಲ್‌ ವಿ.ಕೆ.ಸಿಂಗ್‌ ಅವರು ನಿರ್ಗಮನ ಪಥಸಂಚಲನದ ಪರಿಶೀಲನೆ ನಡೆಸಿದರು. 

ಕಾರ್ಯಕ್ರಮದಲ್ಲಿ ಸಾಧಕರ ಪೋಷಕರು, ಗಣ್ಯರು, ಶಾಲಾ ಮಕ್ಕಳು, ನಾಗರಿಕರು, ಯೋಧರು ಮತ್ತು ನಿವೃತ್ತ ಯೋಧರು ಭಾಗಿಯಾಗಿದ್ದರು. ಸಂಪೂರ್ಣ ವಾತಾವರಣವು ಉತ್ಸಾಹಭರಿತವೂ, ವೈವಿಧ್ಯತೆಯಿಂದ ಕೂಡಿತ್ತು.

ವಿ.ಕೆ ಸಿಂಗ್‌ ಅವರು ಮೆರಿಟ್‌ ಆಧಾರದಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ  ಚಿನ್ನ, ಬೆಳ್ಳಿ ಮತ್ತು ಕಂಚಿನ ರಾಷ್ಟ್ರಪತಿಗಳ ಪದಕವನ್ನು ಪ್ರದಾನ ಮಾಡಿದರು.

ಬಿಸಿಎ ಪ್ರಿನ್ಸ್‌ ರಾಜ್‌ ಅವರಿಗೆ ಚಿನ್ನದ ಪದಕ, ಎಸಿಸಿ ಉದಯ್‌ವೀರ ಸಿಂಗ್‌ ನೇಗಿ ಅವರಿಗೆ ಬೆಳ್ಳಿ ಪದಕ ಮತ್ತು ಬಿಸಿಸಿ ತೇಜಸ್‌ ಭಟ್‌ ಅವರಿಗೆ ಕಂಚಿನ ಪದಕವನ್ನು ನೀಡಲಾಯಿತು.

ಪುರುಷ ಮತ್ತು ಮಹಿಳಾ ಕೆಡೆಟ್‌ಗಳು ನಿರ್ಗಮನ ಪಥಸಂಚಲನದಲ್ಲಿ ಭಾಗಿಯಾಗಿದ್ದರು
 ಈ ಮಹಿಳೆಯರು ‘ನಾರಿಶಕ್ತಿ’ಯ ಸಂಕೇತ. ಮಹಿಳೆಯರ ಬೆಳವಣಿಗೆ ಮಾತ್ರವಲ್ಲದೆ; ಮಹಿಳಾ ನೇತೃತ್ವದ ಅಭಿವೃದ್ಧಿಗೆ ಇದು ಮುನ್ನುಡಿ
ವಿ.ಕೆ.ಸಿಂಗ್‌ ಮಿಜೋರಾಂ ರಾಜ್ಯಪಾಲ

ಸುಪ್ರೀಂ ನಿರ್ದೇಶನದ ಬಳಿಕ ಅವಕಾಶ

ಸುಪ್ರೀಂ ಕೋರ್ಟ್‌ 2021ರಲ್ಲಿ ನಿರ್ದೇಶನ ನೀಡಿದ ನಂತರ ಕೇಂದ್ರ ಲೋಕಸೇವಾ ಆಯೋಗವು ಮಹಿಳೆಯರಿಗೆ ರಕ್ಷಣಾ ಅಕಾಡೆಮಿಗೆ ಸೇರ್ಪಡೆಯಾಗಲು ಅವಕಾಶ ನೀಡಿತ್ತು.  ಹೀಗಾಗಿ ಮೊದಲ ಬ್ಯಾಚ್‌ನ  ಮಹಿಳಾ ಕೆಡೆಟ್‌ಗಳು 2022ರಲ್ಲಿ ‘ಎನ್‌ಡಿಎ’ ಕೋರ್ಸ್‌ಗೆ ಸೇರ್ಪಡೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.