ADVERTISEMENT

ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ತೀರ್ಪು ನೀಡಿದ್ದ ಜಡ್ಜ್‌ ಬಿಜೆಪಿ ಸೇರಲು ಒಲವು

ಸ್ವಾಮಿ ಅಸೀಮಾನಂದ ಸೇರಿ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಿದ್ದ ನ್ಯಾಯಾಧೀಶ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 2:07 IST
Last Updated 22 ಸೆಪ್ಟೆಂಬರ್ 2018, 2:07 IST
   

ಹೈದರಾಬಾದ್: ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ನೀಡಿದ್ದ ಮೆಟ್ರೊಪಾಲಿಟನ್‌ ಸೆಷನ್ಸ್‌ ನ್ಯಾಯಾಧೀಶ (ನಿವೃತ್ತ) ರವೀಂದರ್ ರೆಡ್ಡಿ ಬಿಜೆಪಿ ಸೇರಲು ಬಯಸಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್ 14ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೈದರಾಬಾದ್‌ಗೆ ಬಂದಿದ್ದಾಗ ಅವರನ್ನು ರೆಡ್ಡಿ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಜತೆಗೆ, ಬೌದ್ಧಿಕವಾಗಿ ಅಥವಾ ಚುನಾವಣಾ ರಾಜಕೀಯದ ಮೂಲಕ ಪಕ್ಷಕ್ಕೆ ಕೊಡುಗೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದರು ಎಂದು ಬಿಜೆಪಿಯ ತೆಲಂಗಾಣ ಘಟಕದ ಮುಖ್ಯಸ್ಥ ಡಾ. ಕೆ. ಲಕ್ಷ್ಮಣ್ ಹೇಳಿಕೆ ಉಲ್ಲೇಖಿಸಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ರೆಡ್ಡಿ ಅವರು ಪಕ್ಷಕ್ಕೆ ಸೇರುವುದು ಅಥವಾ ಪಕ್ಷಕ್ಕೆ ಸೇರಿದರೆ ಅವರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಮೆಟ್ರೊಪಾಲಿಟನ್ ಮತ್ತು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ನ್ಯಾಯಾಲಯದ ನಾಲ್ಕನೇ ಹೆಚ್ಚುವರಿ ನ್ಯಾಯಾಧೀಶರಾಗಿದ್ದ ರೆಡ್ಡಿ ಏಪ್ರಿಲ್‌ 16ರಂದು ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ತೀರ್ಪು ನೀಡಿದ್ದರು. ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಸೇರಿ ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದರು. ತೀರ್ಪು ನೀಡಿದ ನಂತರ, ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮೆಟ್ರೊಪಾಲಿಟನ್ ಸೆಷೆನ್ಸ್ ಜಡ್ಜ್‌ ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.

ತೀರ್ಪಿನಲ್ಲಿ ಆರ್‌ಎಸ್‌ಎಸ್‌ ಬಗ್ಗೆ ಉಲ್ಲೇಖ!

‘2007ರ ಮೇ 18ರಂದು ಮೆಕ್ಕಾ ಮಸೀದಿಯಲ್ಲಿ ನಡೆದಿದ್ದ ಸ್ಫೋಟ ಸಂಚಿನಲ್ಲಿ ಅಸೀಮಾನಂದ ಮತ್ತು ಇತರ ಆರೋಪಿಗಳು ಭಾಗಿಯಾಗಿರುವುದು ವಿಚಾರಣೆಯಲ್ಲಿ ದೃಢಪಟ್ಟಿಲ್ಲ. ಆರ್‌ಎಸ್‌ಎಸ್‌ ಸದಸ್ಯ ಎಂದ ಮಾತ್ರಕ್ಕೆ ಯಾರೊಬ್ಬನೂ ಕೋಮುವಾದಿಯಾಗಲಾರ. ಆರ್‌ಎಸ್‌ಎಸ್ ನಿಷೇಧಿತ ಸಂಘಟನೆಯಲ್ಲ. ಅದಕ್ಕಾಗಿ ಯಾರಾದರೂ ಕೆಲಸ ಮಾಡುತ್ತಿದ್ದರೆ ಅವರು ಕೋಮುವಾದಿಯಾಗುತ್ತಾರೆ ಅಥವಾ ಸಮಾಜವಿರೋಧಿಯಾಗುತ್ತಾರೆ ಎನ್ನಲಾಗದು’ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದರು.

ಭೂವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆರೋಪಿಗಳ ಪರವಾಗಿ ನಿರೀಕ್ಷಣಾ ಜಾಮೀನು ನೀಡಿದ್ದ ಆರೋಪಕ್ಕೆ ಸಂಬಂಧಿಸಿ ರೆಡ್ಡಿ ವಿರುದ್ಧ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಅವರ ರಾಜೀನಾಮೆಯನ್ನು ಹೈಕೋರ್ಟ್ ಅಂಗೀಕರಿಸಿದೆ.

ಅಮಾನತಾಗಿದ್ದರು

ತೆಲಂಗಾಣದ ನ್ಯಾಯಾಲಯಗಳಿಗೆ ಆಂಧ್ರ ಪ್ರದೇಶ ಮೂಲದವರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡುವುದನ್ನು ವಿರೋಧಿಸಿ 2016ರಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿಯೂ ರೆಡ್ಡಿ ಭಾಗವಹಿಸಿದ್ದರು. ಇದಕ್ಕಾಗಿ 2016ರ ಜೂನ್‌ನಲ್ಲಿ 11 ನ್ಯಾಯಾಧೀಶರನ್ನು ಹೈಕೋರ್ಟ್ ಅಮಾನತು ಮಾಡಿತ್ತು. ಇದರಲ್ಲಿ ರೆಡ್ಡಿಯೂ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.